'ಜೋಗಯ್ಯ'ನ ರಕ್ಷಣೆಗೆ ನಿವೃತ್ತ ಸೈನಿಕರು!
ಜೋಗಯ್ಯ ಆಡಿಯೋಗಳನ್ನು ಪೈರಸಿಯಿಂದ ತಡೆಯಲು ಲಾಕಿಂಗ್ ಸಿಸ್ಟಂ ಅಳವಡಿಸುವ ವಿಷಯ ನಿಮಗೆ ತಿಳಿದೇ ಇದೆ. ಈ ಲಾಕಿಂಗ್ ಸಿಸ್ಟಂ ಜೊತೆ ಚಿತ್ರದ ಆಡಿಯೋ ಹಕ್ಕು ಪಡೆದಿರುವ ಅಶ್ವಿನಿ ಮೀಡಿಯಾ ನೆಟ್ ವರ್ಕ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಅದೇನಂದರೆ ಜೋಗಯ್ಯನನ್ನು ಕಾವಲು ಕಾಯಲು ಐದು ಮಂದಿ ಮಾಜಿ ಸೈನಿಕರನ್ನು ಅಶ್ವಿನಿ ಮೀಡಿಯಾ ಮಾಲೀಕ ಕೃಷ್ಣಪ್ರಸಾದ್ ನೇಮಕ ಮಾಡಿದ್ದಾರೆ.
ಜೋಗಯ್ಯ ಪೈರಸಿ ಬಗ್ಗೆ ಗೊತ್ತಾದರೆ ಈ ಮಾಜಿ ಸೈನಿಕರು ಕೂಡಲೇ ಆಕ್ಷನ್ ತೆಗೆದು ಕೊಳ್ಳಲಿದ್ದಾರೆ. ಲಾಕಿಂಗ್ ಸಿಸ್ಟಂ ಇದ್ದರೂ ಪೈರಸಿ ಆಗುವ ಬಗ್ಗೆ ಅರಿತ ಜೋಗಯ್ಯ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ. ಇದಕ್ಕಾಗಿ ಐದು ತಂಡಗಳನ್ನು ಸಂಸ್ಥೆ ನೇಮಕ ಮಾಡಿದೆ. ಪ್ರತಿ ತಂಡದಲ್ಲಿ 14 ಮಂದಿ ಇರುತ್ತಾರೆ. ಪ್ರತಿ ತಂಡಕ್ಕೆ ಒಬ್ಬೊಬ್ಬ ಮಾಜಿ ಸೈನಿಕರನ್ನು ನೇಮಕ ಮಾಡಿಕೊಂಡು ಕೃಷ್ಣಪ್ರಸಾದ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ.
ಸೈನಿಕರು ಶಿಸ್ತನ್ನು ಬೆಳೆಸಿಕೊಂಡು ಬಂದಿರುವವರು ಮತ್ತು ಹಿಡಿದ ಕೆಲಸವನ್ನು ಛಲದಿಂದ ಮಾಡುವವರು. ಇದಕ್ಕಾಗಿಯೇ ಮಾಜಿ ಸೈನಿಕರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದು ಶಿವಣ್ಣ ಅವರ ನೂರನೇ ಚಿತ್ರವಾಗಿರುವುದರಿಂದ ಚಿತ್ರದ ಹಾಡು ಎಲ್ಲೂ ಪೈರಸಿ ಆಗಬಾರದೆನ್ನುವುದು ನಮ್ಮ ಉದ್ದೇಶ. ಶಿವಣ್ಣ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿ 25 ತುಂಬಿರುವ ದಿನವಾದ ಫೆಬ್ರವರಿ 19ಕ್ಕೆ ಅದ್ದೂರಿಯಾಗಿ ಧ್ವನಿಸುರುಳಿ ಬಿಡುಗಡೆ ಮಾಡಲಿದ್ದೇವೆ ಎಂದು ಅಶ್ವಿನಿ ಮಿಡಿಯಾ ಮಾಲೀಕ ಕೃಷ್ಣಪ್ರಸಾದ್ ಹೇಳಿದ್ದಾರೆ.
ಪೈರಸಿ ತಡೆಯಲು ಕೆಎಫ್ ಸಿಸಿ ನಾನಾ ಕ್ರಮ ಕೈಗೊಂಡಿದ್ದರೂ ತಡೆಯಲು ಸಾಧ್ಯವಾಗುತ್ತಿಲ್ಲ. ಪೈರಸಿ ಮಾಡುವವರಿಗೆ ರಂಗೋಲಿ ಕೆಳಗಡೆಯಿಂದ ತೂರುವುದನ್ನು ಸಿದ್ಧಿಸಿಕೊಂಡಿರುತ್ತಾರೆ. ಪರಿಸ್ಥಿತಿ ಹೀಗಿರುವಾಗ ಆಡಿಯೋ ಸಂಸ್ಥೆ ಮಾಲಿಕರು ಕೈಗೊಂಡಿರುವ ಕ್ರಮ ಸರಿಯಾದದ್ದೆ. ಪೈರಸಿ ಹಾವಳಿ ತಡೆಗೆ ಗೂಂಡಾ ಕಾಯ್ದೆ ತರಬೇಕೆಂದು ವಾಣಿಜ್ಯ ಮಂಡಳಿ ಸರಕಾರಕ್ಕೆ ಮನವಿಯನ್ನೂ ಮಾಡಿದೆ.