ಕನ್ನಡ ರಂಗ ಕಲಾವಿದ ಗುಡಿಗೇರಿ ಬಸವರಾಜ್ ವಿಧಿವಶ

09/02/2011 11:44


 

ರಾಜ್ಯ ಸರಕಾರದ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ಕನ್ನಡ ರಂಗಭೂಮಿಯ ಹಿರಿಯ ಕಲಾವಿದ, ನಟ, ನಾಟಕಕಾರ ಗುಡಿಗೇರಿ ಬಸವರಾಜು ಇನ್ನು ಕೇವಲ ನೆನಪು ಮಾತ್ರ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮಂಗಳವಾರ ಚಿರನಿದ್ರೆಗೆ ಜಾರಿದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಸೂಳೆಯ ಮಗ, ರೈತನ ಮಕ್ಕಳು, ದುಡ್ಡಿನ ದರ್ಪ ಸೇರಿದಂತೆ ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ಬಸವರಾಜು ರಚಿಸಿದ್ದರು. ಸಾಕಷ್ಟು ಸಂಕಷ್ಟಗಳ ನಡುವೆಯೂ ಸಂಗಮೇಶ್ವರ ನಾಟ್ಯ ಸಂಘವನ್ನು ಅವರು ಮುನ್ನಡೆಸಿಕೊಂಡು ಬಂದಿದ್ದರು. ವೃತ್ತಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಉತ್ತರ ಕರ್ನಾಟಕ ವೃತ್ತಿ ರಂಗಭೂಮಿಯ ಹುಲಿ ಎಂದೇ ಜನಜನಿತರಾಗಿದ್ದರು.

ಸುದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕ್ಯಾನ್ಸರ್ ಮತ್ತು ಮಧುಮೇಹ ಜರ್ಝರಿತಗೊಳಿಸಿತ್ತು. ಎರಡು ಕಾಲುಗಳು ಹಾಗೂ ಕಿಡ್ನಿ ಕೂಡ ಮಧುಮೇಹಕ್ಕೆ ಬಲಿಯಾಗಿದ್ದವು. ಅವರ ನಿಧನದಿಂದ ರಂಗಭೂಮಿ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.

ಸಂಗ್ಯಾ ಬಾಳ್ಯ , ರೈತನ ಮಕ್ಕಳು ಹಾಗೂ ಸಿಂಧೂರ ಲಕ್ಷ್ಮಣ ಚಿತ್ರಗಳಲ್ಲೂ ಗುಡಿಗೇರಿ ಬಸವರಾಜ್ ಅಭಿನಯಿಸಿದ್ದರು. ಗುಡಿಗೇರಿ ಅವರ ನಿಧನಕ್ಕೆ ಕಲಾವಿದರು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಹುಟ್ಟೂರು ಗುಡಿಗೇರಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.