ಪ್ರತಿಭಟನೆ ಹಾದಿಯಲ್ಲಿ ಸೋತ ಗಾಂಧಿವಾದ

30/04/2012 19:51

ಚಾಣುಕ್ಯ. ಎಂ

 

ಉಸ್ಮಾನಿಯಾ ವಿಶ್ವವಿದ್ಯನಿಲಯದಲ್ಲೇ ನಡೆದ ಘಟನೆಗಳು ಇಡೀ ದೇಶದ ಸಹೃದಯರ ಮನವನ್ನೇ ಕೆಣಕಿತು. ತೆಲಂಗಾಣ ಪ್ರತ್ಯೇಕತೆಗಾಗಿ ಹೋರಾಟ ನಿರತರಾಗಿದ್ದ ತೆಲಂಗಾಣ ವಿದ್ಯಾರ್ಥಿ ಹೋರಾಟ ಸಂಘದ ಪ್ರತಿನಿಧಿ ಬೆಂಕಿ ಹಚ್ಚಿಕೊಂಡು ನಡುಬೀದಿಯಲ್ಲೇ ಸುಟ್ಟು ಕರಕಲಾದ. ಇದು ಹೋರಾಟದ ತೀವ್ರತೆಯನ್ನು ಹೆಚ್ಚಿಸಿತು. ಜೊತೆಯಲ್ಲೇ ಹೋರಾಟಗಾರರ ಹಿಂಸಾ ಪ್ರವೃತ್ತಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡಿತು.

============================================================

 
ಕೆಲವು ತಿಂಗಳುಗಳ ಹಿಂದಿನ ಮಾತು. ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯ ತೆಲಂಗಾಣ ಹೋರಾಟದ ವೇದಿಕೆಯಾಗಿತ್ತು. ವಿದ್ಯಾರ್ಥಿಗಳು, ರೈತರು, ಪ್ರಗತಿಪರರು, ರಾಜಕಾರಣಿಗಳು ತಿಂಗಳುಗಟ್ಟಲೆ ಬಿಡಾರ ಹೂಡಿ ತೆಲಂಗಾಣ ಪ್ರತ್ಯೇಕತೆಗಾಗಿ ಸ್ವಾತಂತ್ರ್ಯ ಯೋಧರಂತೆ ಹೋರಾಡಿದರು. ಕೆಲವರು ತಮ್ಮ ಬೇಳೆ ಬೇಯಿಸಿಕೊಂಡರು. ಮತ್ತು ಕೆಲವರು ಬೆಂಕಿ ಹಾಕಿಕೊಂಡು ಆತ್ಮಹತ್ಯಗೂ ಪ್ರಯತ್ನಿಸಿದರು. ಅದೇ ಸ್ಥಳ ಇತ್ತೀಚೆಗೆ ಮತ್ತೊಂದು ವಿವಾದಕ್ಕೆ, ಚರ್ಚೆಗೆ ಕಾರಣವಾಗಿದೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಾಗೂ ವಿದ್ಯಾರ್ಥಿನಿಲಯದಲ್ಲಿ ಮಾಂಸ ತಿನ್ನದಂತೆ ಜಾರಿಗೆ ತರಲಾದ ಹೊಸ ಕಾನೂನನ್ನು ವಿರೋಧಿಸಿ ದಲಿತ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲೇ ದನದ ಮಾಂಸದ ಅಡುಗೆ ಮಾಡಿ ಉಣಬಡಿಸುವ ಸಂದರ್ಭದಲ್ಲೇ ವಿದ್ಯಾರ್ಥಿಯೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಕೃತ್ಯ ಎಸಗಿದವರು ಯಾರು? ಕಾರಣವೇನು ಎಂದು ತಿಳಿಯುವ ಮೊದಲು ದೇಶಾದ್ಯಂತ ಪ್ರತಿಭಟನೆಗಳು ಸಾಗುತ್ತಿರುವ ಮಾರ್ಗಗಳ ಬಗ್ಗೆ ಒಮ್ಮೆ ಇಣುಕಬೇಕಿದೆ.
ರಾಜ್ಯ ಸರ್ಕಾರ ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟವನ್ನು ನಿಷೇಧಿಸಿತು. ಸರ್ಕಾರ ಜಾರಿಗೆ ತಂದ ನೂತನ ಕಾನೂನನ್ನು ವಿರೋಧಿಸಿ ದಲಿತ ಪರ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆ ಎದುರಲ್ಲೇ ಮಾಂಸದ ಅಡುಗೆ ಮಾಡಿ ತಿಂದರು. ಇದನ್ನು  ಚಿಂತಕರು ವಿಭಿನ್ನ ಹೋರಾಟ ಎಂದೇ ಬಣ್ಣಿಸಿದರು. ಮತ್ತೆ ಕೆಲವರು ನ್ಯಾಯ ಸಮ್ಮತವಲ್ಲ ಎಂದು ಜರಿದರು. 
ಇಲ್ಲೇ ನೆನಪಾದದ್ದು ಗಾಂಧಿ ವಾದ ಹಾಗೂ ಅಹಿಂಸಾ ಹೋರಾಟ. ದನದ ಮಾಂಸ ತಿನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಗಾಂಧೀಜಿ ಬದುಕಿನ ಘಟನೆಯೊಂದನ್ನು ಅವಲೋಕಿಸಬಹುದು. ಪತ್ನಿ ಕಸ್ತೂರಬಾ ಕ್ಷಯ ರೋಗದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ವೈದ್ಯರು ದನದ ಮಾಂಸ ತಿನ್ನಲು ಸಲಹೆ ನೀಡಿದ್ದರು. ಪತ್ನಿಯ ಆರೋಗ್ಯದ ಬಗ್ಗೆಯೂ ಚಿಂತಿಸದ ಗಾಂಧೀಜಿ ಮಾಂಸಾಹಾರ ಕೊಡಲು ನಿರಾಕರಿಸಿದರು. ಹಾಗೆಂದು ಮಾಂಸ ತಿನ್ನಬೇಡಿ ಎಂದು ಅವರು ಎಲ್ಲಿಯೂ ಹೇಳಲಿಲ್ಲ. ದೇವರ ಹೆಸರಲ್ಲಿ ಬಲಿದಾನ ಮಾಡಬೇಡಿ ಎಂದಷ್ಟೇ ಸಲಹೆ ನೀಡಿದರು.
ಚಳವಳಿಗೆ ಉಪವಾಸದ ಮಾರ್ಗ ತೋರಿಸಿದವರಲ್ಲಿ ಪ್ರಥಮರೆನ್ನಿಸಿಕೊಂಡವರು ಗಾಂಧೀಜಿ. ಅವರ ಹೋರಾಟ ಇಂದಿನ ಯುವಕರಿಗೆ ಆದರ್ಶವಾಗಲಿಲ್ಲ ಎಂಬುದೇ ದುರಂತದ ಸಂಗತಿ. ತಕ್ಷಣಕ್ಕೆ ಪ್ರಚಾರ ಗಿಟ್ಟಿಸಬೇಕೆಂಬ ಕೆಲವರ ಹಂಬಲವೇ ಹಿಂಸಾತ್ಮಕ ಹೋರಾಟಗಳಿಗೆ ಕಾರಣವಾಯಿತು. ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಒಂದೇ ಉದ್ದೇಶದಿಂದ ಹಾಗೂ ಸ್ವಾರ್ಥ ಸಾಧನೆಗಾಗಿ ಕೆಲವರು ಪ್ರತಿಭಟನೆ ಹೆಸರಲ್ಲಿ ಅಸಹ್ಯಕರ ಪದ್ದತಿಗಳಿಗೆ ದಾರಿ ತೋರಿದ್ದಾರೆ.
ಉಸ್ಮಾನಿಯಾ ವಿಶ್ವವಿದ್ಯನಿಲಯದಲ್ಲೇ ನಡೆದ ಘಟನೆಗಳು ಇಡೀ ದೇಶದ ಸಹೃದಯರ ಮನವನ್ನೇ ಕೆಣಕಿತು. ತೆಲಂಗಾಣ ಪ್ರತ್ಯೇಕತೆಗಾಗಿ ಹೋರಾಟ ನಿರತರಾಗಿದ್ದ ತೆಲಂಗಾಣ ವಿದ್ಯಾರ್ಥಿ ಹೋರಾಟ ಸಂಘದ ಪ್ರತಿನಿಧಿ ಬೆಂಕಿ ಹಚ್ಚಿಕೊಂಡು ನಡುಬೀದಿಯಲ್ಲೇ ಸುಟ್ಟು ಕರಕಲಾದ. ಇದು ಹೋರಾಟದ ತೀವ್ರತೆಯನ್ನು ಹೆಚ್ಚಿಸಿತು. ಜೊತೆಯಲ್ಲೇ ಹೋರಾಟಗಾರರ ಹಿಂಸಾ ಪ್ರವೃತ್ತಿಗೆ ಪರೋಕ್ಷವಾಗಿ ಕುಮ್ಮಕ್ಕು ನೀಡಿತು.
ಅದೇ ಯಾಕೆ ಮೊನ್ನೆ ಮೊನ್ನೆ ತಾನೆ ಚೀನಾ ಅಧ್ಯಕ್ಷ ಭಾರತ ಭೇಟಿ ಖಂಡಿಸಿ ಟಿಬೆಟ್ ಯುವಕನೊಬ್ಬ ಬೆಂಕಿ ಹಚ್ಚಿಕೊಂಡು ರಾಜಧಾನಿ ದೆಹಲಿಯ ಮುಖ್ಯ ರಸ್ತೆಯಲ್ಲೇ ಬೆಂದ ಹಸಿ ಹಸಿ ದೃಶ್ಯಗಳು ಮಾಧ್ಯಮದಲ್ಲಿ ಪ್ರಸಾರವಾಗುವ ಮೂಲಕ ಎಲ್ಲರನ್ನು ಚಕಿತಗೊಳಿಸಿತು.
ಪ್ರತಿಭಟನೆಯ ಕಾವು ತೀವ್ರಗೊಳಿಸುವ ನಡುವೆಯೇ ಹಲವು ಜೀವಗಳು ಬೆಂಕಿಗೆ ಆಹುತಿಯಾದವು. ಇಂದು ನಾಳೆ ನೆನೆದು ಮಡಿದವರನ್ನು ಮರೆತೇ ಹೋದರು. 
ಇದರ ನಡುವೆಯೇ ಬೆತ್ತಲೆ ಸೇವೆಗಳಂತ ಮನಕಲಕುವ ಪ್ರತಿಭಟನೆಗಳು ಹಾದು ಹೋದವು. ಭೂಸೇನೆಯ ಸೈನಿಕರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಣಿಪುರದ ಕೆಲವು ಮಹಿಳೆಯರು ನಡುಬೀದಿಯಲ್ಲೇ ಬೆತ್ತಲಾಗಿ ಮೆರವಣಿಗೆ ಮಾಡಿದರು. ಆದರೂ ಅದೇ ರಾಜ್ಯದ ಚಾನು ಶರ್ಮಿಳ ಸೇನಾದಳದ ಹಿಂಸಾತ್ಮಕ ದೋರಣೆಗಳಿಂದ ಮನನೊಂದು ೫೦೦ ವಾರಗಳ ಕಾಲ ನಡೆಸಿದ ಉಪವಾಸ ಸತ್ಯಾಗ್ರಹ ಎಷ್ಟೋ ದಿನಗಳ ನಂತರ ಬೆಳಕಿಗೆ ಬಂತು. 
ಅಹಿಂಸಾ ತತ್ವದಡಿ ಹೋರಾಟ ಕಟ್ಟಿ ಸ್ವಾತಂತ್ರ್ಯ ಚಳವಳಿಗೆ ಹೊಸ ಮಾರ್ಗ ತೋರಿದವರು ಗಾಂಧೀಜಿ. ಇಂದು ಕೂಡ ಪ್ರಪಂಚ ಇವರ ಹೋರಾಟವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ಇಂತಹ ಗಾಂಧಿ ಹುಟ್ಟಿದ ನಾಡಲ್ಲೇ ಈ ಸಂಗತಿಗಳು ಘಟಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ.
 ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದದ್ದೂ ಅದೇ. ಮೊದಲನೆಯದಾಗಿ ವಿ.ವಿ ಆಡಳಿತ ಮಂಡಳಿ ಕಾಲೇಜು ಆವರಣದಲ್ಲಿ ಮಾಂಸಾಹಾರ ನಿಷೇಧಿಸಿದ್ದು ತಪ್ಪೇ. ಆದರೂ, ಅದನ್ನು ವಿರೋಧಿಸಿ ಪ್ರತಿಭಟಿಸಿದ ಮಾರ್ಗ ಸರಿಯಲ್ಲ. ಪ್ರತಿಭಟನೆ ಉಗ್ರರೂಪ ತಾಳಿ ಹಿಂಸಾಚಾರಕ್ಕೆ ತಿರುಗಿದ್ದಕ್ಕೂ ವಿಶ್ವವಿದ್ಯಾನಿಲಯದ ಕಾನೂನೇ ಕಾರಣ. ಪ್ರಕರಣದ ಹೊಣೆಯನ್ನು ಆಡಳಿತ ಮಂಡಳಿಯೇ ಹೊರಬೇಕಿದೆ. ಕಾನೂನು ಸಂಹಿತೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಅದಕ್ಕೂ ಕೆಲ ನೀತಿ ನಿಯಮಗಳಿವೆ. ಅದನ್ನು ಅರಿತು ಚಳವಳಿ ಕಟ್ಟಿದರೆ ಎಲ್ಲವೂ ಸುಗಮವಾದೀತು.