ರೈತ ಮತ್ತು ಹಸಿವೂ, ಟೊಮ್ಯಾಟೋ ಹಬ್ಬವೂ

17/02/2012 08:23

 

ಮೊನ್ನೆ ಮೊನ್ನೆಯಷ್ಟೆ ರೈತರ ಗುಂಪೊಂದು ತಾವೇ ಬೆಳೆದ ಈರುಳ್ಳಿ, ಟೊಮ್ಯಾಟೋಗಳನ್ನು ಬೀದಿಗೆಸೆದು ರೋದಿಸಿದ್ದು ಇನ್ನು ನಮ್ಮ ಕಣ್ಮುಂದಿರುವಾಗಲೇ ಈಗ ಇನ್ನೊಂದು ತಂಡ ಬೆಂಗಳೂರಿನಲ್ಲಿ ಟೊಮ್ಯಾಟೋಗಳನ್ನು ಎಸೆದಾಡುವ ಪ್ರಯತ್ನಕ್ಕೆ ಮುಂದಾಗಿದೆ. ಮೊದಲನೇ ಎಸೆದಾಟದಲ್ಲಿ ರೈತನ ಹತಾಶೆ ಇತ್ತು, ಶ್ರಮಕ್ಕೆ ಸೂಕ್ತ ಬೆಲೆಸಿಗದ ಆಕ್ರೋಶವಿತ್ತು, ಆದರೆ ಈ ಚೆಲ್ಲಾಟದಲ್ಲಿ ಭರ್ತಿ ಮೋಜಿರುತ್ತೆ, ರೈತ ಹಾಗೂ ಹಸಿವಿನ ಬಗ್ಗೆ ಆಳವಾದ ಅಸಡ್ಡೆ ಇರುತ್ತೆ. ದುಡ್ಡಿರುವ ಮಂದಿ ತಮ್ಮ ಏಕತಾನತೆಯ ನೆಪವಿಟ್ಟು ಪಾರ್ಟಿ ಮಾಡಿಕೊಳ್ಳುವುದೇನೂ ತೀರಾ ಹೊಸದಲ್ಲ. ಆದರೆ ಇಷ್ಟು ದಿನಗಳ ಅವರ ಮೋಜುಗಳು ಕಾಂಚಾಣದ ಮದದಿಂದ ಕೂಡಿರುತ್ತಿದ್ದವು, ಸಾಮಾಜಿಕ ಅಸಮಾನತೆಯ ಬಗ್ಗೆ ದಿವ್ಯ ನಿರ್ಲಕ್ಷ್ಯದಿಂದ ತುಳುಕುತ್ತಿದ್ದವು. ಅವು ಅವರ ವೈಯಕ್ತಿಕ ಸ್ವಾತಂತ್ರ್ಯದ ಪರಿಧಿಯಲ್ಲೆ ಇರುತ್ತಿದ್ದರಿಂದ ಹೆಚ್ಚೆಂದರೆ ಟೀಕಿಸಬಹುದಾಗಿತ್ತೆ ಹೊರತು ಮತ್ತೇನೂ ಮಾಡುವಂತಿರಲಿಲ್ಲ. ಆದರೀಗ ಲಾ ಟೊಮ್ಯಾಟಿನೊ ಎಂಬ ಪಾಶ್ಚಾತ್ಯ ಅನುಕರಣೆಯ ಹಬ್ಬ ಮಾಡಲು ಮುಂದಾಗಿರುವುದು ಮಾತ್ರ ಸಾಮಾನ್ಯರೆಲ್ಲರೂ ಪ್ರತಿಭಟಿಸಲೇಬೇಕಾದ ಸಂದಿಗ್ಧತೆಯನ್ನು ತಂದೊಡ್ಡಿದೆ. ಇದರಿಂದ ಉಂಟಾಗಬಹುದಾದ ಸಾಮಾಜಿಕ, ಆರ್ಥಿಕ ಹಾಗೂ ಆಹಾರ ಭದ್ರತೆಯ ಅಸಮತೋಲನಗಳನ್ನು ಸ್ಥೂಲವಾಗಿ ಗಮನಿಸಿದಾಗ ಇದೆಂತಹ ಕಳವಳಕಾರಿ ಸಂಗತಿ ಎಂಬುದು ಮನದಟ್ಟಾಗುತ್ತದೆ.
 
ಅಸಲಿಗೆ ಈ ಟೊಮ್ಯಾಟೊ ಹಬ್ಬದ ವಿಶೇಷತೆ ಎಂದರೆ ಲೋಡುಗಟ್ಟಲೆ ಟೊಮ್ಯಾಟೊಗಳನ್ನು ಲಾರಿಯಲ್ಲಿ ತುಂಬಿಕೊಂಡು ಒಬ್ಬರತ್ತ ಒಬ್ಬರು ಎಸೆದಾಡಿಕೊಳ್ಳುತ್ತಾ ಮಜಾ ಉಡಾಯಿಸುವುದಾಗಿರುತ್ತೆ. ಹಾಗೆ ಮೈತುಂಬಾ ಟೊಮ್ಯಾಟೊ ರಸ ಮೆತ್ತಿಸಿಕೊಂಡವರಿಗೆ ಭರ್ಜರಿ ಖುಷಿ, ಯಾಕೆಂದರೆ ಅವರ್‍ಯಾರೂ ಬಯಲಲ್ಲಿ ಆ ಪರಿ ತರಕಾರಿಗಳನ್ನು ಎತ್ತಾಡಿದ ಕಲ್ಪನೆಗಳೆ ಇರದ ಐಷರಾಮಿ ಜನ. ಇದು ಮೂಲತಃ ಸ್ಪೈನ್ ದೇಶದ ಸಂಪ್ರದಾಯ, ಅಲ್ಲಿ ಪ್ರತಿ ಆಗಸ್ಟ್ ಕೊನೆಯ ವಾರದಲ್ಲಿ ಲಾ ಟೊಮ್ಯಾಟಿನೊ ಅನ್ನೋ ಇಂತಹ ಹಬ್ಬವನ್ನು ಆಚರಿಸುತ್ತಾರೆ. ಸ್ವತಃ ಅಲ್ಲಿಯ ಸರ್ಕಾರವೇ ತನ್ನ ಪ್ರವಾಸಿಗರನ್ನು ಸೆಳೆಯಲು ಇದಕ್ಕೆ ಪರ್ಮಿಟ್ಟು ನೀಡಿದೆ. ನಮ್ಮವರಿಗೇನಿದ್ದರೂ ಪ್ರಪಂಚ ಪರ್ಯಟನೆಯಲ್ಲಿ ಅದರ ಕುರಿತು ನೋಡಿ ಕೇಳಿದ್ದಷ್ಟೆ ನೆನಪು. ಹಾಗೆ ನೋಡಿದಾಗಲೂ ಇದೆಂತಹ ವೇಸ್ಟು ಮೋಜಿನಾಟವಪ್ಪ ಎಂಬ ಉದ್ಗಾರಗಳೆ ನಮ್ಮಲ್ಲಿ ಮೂಡುತ್ತಿದ್ದ ಕಾರಣ ನಾವೆಲ್ಲ ಹಸಿವನ್ನು ಹತ್ತಿರದಿಂದ ನೋಡಿದವರು. ಸದ್ಯ ಇಂತಹ ಆಚರಣೆ ನಮ್ಮಲ್ಲಿಲ್ಲವಲ್ಲ ಎಂದು ನಿಟ್ಟುಸಿರು ಬಿಡುವ ಮುನ್ನವೆ ನಮ್ಮ ದೇಶದಲ್ಲೆ, ಅದರಲ್ಲೂ ನಮ್ಮದೇ ಬೆಂಗಳೂರಿನಲ್ಲಿ ನಡೆದಿದೆ.
 
ಬೆಂಗಳೂರಿನ ಪ್ಯಾಲೇಸ್ ಗ್ರೌಂಡೆಂದರೆ ಸಾಮಾನ್ಯರ್‍ಯಾರಿಗೂ ಅತ್ತ ಪ್ರವೇಶವಿಲ್ಲ ಎಂಬ ಭಾವನೆಯನ್ನೇ ಪೋಷಿಸಿಕೊಂಡು ಬಂದಿದೆ. ರಾಜಕೀಯ ಪಕ್ಷಗಳ ರ್‍ಯಾಲಿಯೋ ಅಥವಾ ಸಿನಿಮಾದವರ ಕಾರ್ಯಕ್ರಮಗಳೋ ನಡೆದಾಗ ಮಾತ್ರ ನೂಕುನುಗ್ಗಲಿನಲ್ಲಿ ಅಲ್ಲಿ ಸಾಮಾನ್ಯರೆನಿಸಿಕೊಂಡವರು ಹೋಗಿ ಬರಬಹುದಷ್ಟೆ, ಇನ್ನುಳಿದಂತೆ ಸಿರಿವಂತರ ಮದುವೆ ಮುಂಜಿಗಳಿಗೆ ಮಾತ್ರ ಅದು ಸೀಮಿತವಾಗಿದ್ದುಬಿಡುತ್ತದೆ. ಅಲ್ಲಿನ ಸುಮಾರು ನಾಲ್ಕು ಸಾವಿರ ಚದರಡಿಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಎಮೆರಾಲ್ಡ್ ಗ್ರೀನ್ ಅಂಗಳದಲ್ಲಿ ಇದೆ ಸೆಪ್ಟೆಂಬರ್ ೧೮ ರಂದು ಟೊಮ್ಯಾಟೊ ವೇಸ್ಟು ಮಾಡುವ ಹಬ್ಬವನ್ನು ಆಯೋಜಿಸಿದ್ದರು.
 
ಐಷಾರಾಮಿ ಎಂಬ ಒಂದೇ ಕಾರಣಕ್ಕೆ ಇದರ ವಿರುದ್ಧ ತಪ್ಪು, ತಪ್ಪು ಅನ್ನೊ ಬ್ಯಾನರುಗಳನ್ನಿಡಿದರೆ ಅದು ಸಮಂಜಸವೆನಿಸದು. ಅದಕ್ಕಾಗೆ ಸದ್ಯ ನಮ್ಮ ಭಾರತದ ಸ್ಥಿತಿಗತಿಗಳನ್ನು ಗಮನಿಸುವುದು ಒಳಿತು. ನಾವೇನೋ ಅಭಿವೃದ್ಧಿಶೀಲತೆ ಕಲ್ಪನೆಯಲ್ಲಿ ಎಲ್ಲಾ ಸರಿಯಾಗಿದೆ ಎಂದುಕೊಂಡಿರಬಹುದು. ಆದರೆ ೨೦೧೧ ರ ವಿಶ್ವ ಆಹಾರ ಕಾರ್ಯಕ್ರಮ (ತಿಜಿಠಿ) ಇತ್ತೀಚೆಗಷ್ಟೆ ಸಲ್ಲಿಸಿದ ತನ್ನ ವರದಿಯಲ್ಲಿ ಪ್ರಪಂಚದ ಹಸಿವಿನ ಶೇಕಡಾ ೨೫ ರಷ್ಟು ಪ್ರಮಾಣವಿನ್ನು ಭಾರತದಲ್ಲೆ ಬೀಡುಬಿಟ್ಟಿದೆ ಮತ್ತು ನಮ್ಮ ದೇಶದ ಶೇ. ೪೩ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆಂಬ ಆಘಾತಗಳನ್ನು ಬಹಿರಂಗಗೊಳಿಸಿದೆ. ಇವು ಕೇವಲ ಅಧಿಕೃತ ಅಂಕಿ - ಅಂಶಗಳಷ್ಟೆ, ಅದರ ಹೊರತಾಗಿ ಅನ್ನ ಹೀಗಿರಬಹುದೇನೊ ಎಂಬ ಕಲ್ಪನೆಯಲ್ಲೆ ತಮ್ಮ ಚರ್ಮಗಳನ್ನು ಮೂಳೆಗಂಟಿಸಿಕೊಂಡು ಕೊರಗುತ್ತಿರುವ ಸಹಸ್ರಾರು ದೇಹಗಳು ಲೆಕ್ಕಕ್ಕೇ ಸಿಗುವುದಿಲ್ಲ. ಇದು ಹಸಿವಿನ ವಿಷಯವಾದರೆ, ರೈತನ ಬವಣೆಯದು ಮತ್ತೊಂದು ದುರಂತ. ಎಲ್ಲಾ ಕಡೆಯಿಂದಲೂ ಶೋಷಣೆಗೊಳಗಾಗುವ ವರ್ಗವಂತೇನಾದರು ಇದ್ದರೆ ಅದು ಭಾರತೀಯ ರೈತರು ಮಾತ್ರವಿರಬೇಕೇನೊ.
 
ಆಳುವ ಸರ್ಕಾರಗಳಿಂದಲೇ ಉಳುವ ತಮ್ಮ ಭೂಮಿಗೆ ಕುತ್ತು ಬಂದಿದ್ದರೂ, ನೆಲಕ್ಕೆ ನೇಗಿಲೂಡುವ ಕಾಯಕಕ್ಕಿನ್ನು ಅವರು ವಿದಾಯ ಹೇಳಿಲ್ಲ. ಗೊಬ್ಬರ, ಗುಣೆ, ಕಳೆ, ಮಳೆ, ಪೈರು ಎಂಬಂತಹ ಮಂತ್ರಗಳನ್ನೆ ಪಸೆ ಆರಿದ ಗಂಟಲುಗಳಿಂದ ಪಠಿಸಿ ಮಾರುಕಟ್ಟೆಯತ್ತ ಮುಖ ಮಾಡಿದರೆ ಅಲ್ಲೂ ಆತನಿಗೆ ನಿರಾಶೆಯೆ ಜೊತೆಯಾಗುತ್ತಿದೆ. ಇದಕ್ಕೆಲ್ಲಾ ಆತ ಆತ್ಮಹತ್ಯೆಯನ್ನು ಪರಿಹಾರವಾಗಿಸಿಕೊಂಡಿರುವುದು ಮಾತ್ರ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಸಮಸ್ಯೆ. ಮಾನವ ಹಕ್ಕು ಮತ್ತು ಜಾಗತಿಕ ನ್ಯಾಯ ಕೇಂದ್ರವು ಇತ್ತೀಚೆಗಷ್ಟೆ, ಭಾರತದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಸರ್ಕಾರಗಳು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಅಂತ ಛೀಮಾರಿ ಹಾಕಿದೆ.
 
ಇಷ್ಟೆಲ್ಲ ಭಯಂಕರ ಸತ್ಯಗಳಿರುವಾಗ ಯಾರೋ ಕೆಲ ಹಣವಂತರು ಮೋಜಿನ ಹೆಸರಿನಲ್ಲಿ ಟೊಮ್ಯಾಟೊವನ್ನು ಕಾಲಡಿ ಹಾಕಿ ತುಳಿದಾಡುವುದು ಅದೆಷ್ಟರ ಮಟ್ಟಿಗೆ ಸರಿಯೆನಿಸುತ್ತದೆ. ಇಂತಹ ವಿಚಿತ್ರ ಕಾರ್ಯಕ್ರಮ ಆಯೋಜನೆಯಾಗುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೆ ಸಾವಿರಾರು ಪ್ರತಿಭಟನೆಯ ಕೂಗುಗಳು ಕೇಳಿಬಂದಿವೆ. ತಮ್ಮ ಘನಘೋರ ಕೃತ್ಯಕ್ಕೆ ಅಪಾಲಜಿಯೆಂಬಂತೆ ಸಂಘಟಕರು ಆರೋಪಗಳಿಗೆಲ್ಲ ಸಬೂಬು ಕೊಡಲು ಮುಂದಾಗುತ್ತಿದ್ದಾರಾದರೂ ಅವ್ಯಾವೂ ಎದುರಾಗುವ ಅಸಮತೋಲನವನ್ನು ಸರಿಗೊಳಿಸುವಷ್ಟು ಸಮರ್ಥತೆಯನ್ನು ಪ್ರದರ್ಶಿಸುತ್ತಿಲ್ಲ. ಮೊಟ್ಟ ಮೊದಲನೆಯದಾಗಿ ರೈತನ ಶ್ರಮ ಹಾಗೂ ಹಸಿವಿನ ಕೂಗುಗಳನ್ನು ಅವರು ಅಣಕಿಸುತ್ತಿರುವುದೇ ಒಪ್ಪುವಂತದ್ದಲ್ಲ. ಇನ್ನು ರೈತರಿಂದ ನೇರವಾಗಿ ತಾವು ಟೊಮ್ಯಾಟೊವನ್ನು ಖರೀದಿಸುತ್ತೇವೆ. ಆದ್ದರಿಂದ ರೈತರಿಗೆ ಅನುಕೂಲವಾಗುವುದೆಂಬ ಅವರ ಹೇಳಿಕೆ ಅರ್ಧ ಸತ್ಯದಂತಿದೆ. ಹೋಗಲಿ, ಅವರು ಹೇಳುವಂತೆಯೇ ರೈತನಿಗೆ ಬೆಲೆಯ ದೃಷ್ಟಿಯಿಂದ ಸಹಾಯವಾಗುತ್ತದೆ ಎಂದು ಭಾವಿಸೋಣ, ಆದರೆ ಅವರ ಕೆಲವೇ ಗಂಟೆಗಳ ಹಬ್ಬ ಮುಗಿದ ನಂತರದ ಅರಿವೇನಾದರು ಅವರಿಗಿದೆಯೇ? ಪ್ರಪಂಚದ ಸರಾಸರಿ ಟೊಮ್ಯಾಟೊ ಉತ್ಪಾದನೆ ಪ್ರತಿ ಹೆಕ್ಟೇರ್‌ಗೆ ೨೩ ಟನ್ ಇದ್ದರೆ ನಮ್ಮದು ಕೇವಲ ೯. ೬ ಟನ್ ಮಾತ್ರ.
 
ಇಲ್ಲಿಗೆ ಏಳು ವರ್ಷಗಳ ಹಿಂದಿನ ಗಣನೆಯಂತೆಯೇ ಉತ್ತರಭಾರತದಲ್ಲಿ ಪ್ರತಿ ವರ್ಷ ಗ್ರಾಹಕರ ಟೊಮ್ಯಾಟೊ ಬೇಡಿಕೆ ೧೦,೦೦೦ - ೧೨,೦೦೦ ಮೆಟ್ರಿಕ್ ಟನ್‌ಗಳಿದ್ದರೆ ಉತ್ಪಾದನೆ ಕೇವಲ ೪೦೦೦ - ೫೦೦೦ ಮೆಟ್ರಿಕ್ ಟನ್‌ನಷ್ಟಿತ್ತು. ಅಲ್ಲಿಗೆ ತೃಪ್ತಿಕರವಾದ ಉತ್ಪಾದನೆ ನಮ್ಮಲ್ಲಿಲ್ಲವೆಂಬುದು ಸ್ಪಷ್ಟವಾದಂತಾಯಿತು. ಹೀಗಿರುವಾಗ ಈ ಜನ ಏಕಾಏಕಿ ಸಾವಿರಾರು ಟನ್ ಟೊಮ್ಯಾಟೊಗಳನ್ನು ತುಳಿದಾಡಿಬಿಟ್ಟರೆ ತದನಂತರ ಕಾಣಿಸಿಕೊಳ್ಳುವ ಟೊಮ್ಯಾಟೊ ಅಭಾವದಿಂದ ದರ ಸಿಕ್ಕಾಪಟ್ಟೆ ಹೆಚ್ಚಾಗುವುದು ಶತಸಿದ್ದ. ಆಗ ಸಾಮಾನ್ಯ ಜನತೆ ಬೆಲೆ ತೆರಬೇಕಾಗುವುದು, ಅದರಲ್ಲಿ ಇದೇ ರೈತರೂ ಸೇರಿಕೊಂಡಿರುತ್ತಾರೆ. ಆದರೆ ಅದು ಇವರಿಗೆ ಬೇಡದ ಸಂಗತಿ, ಯಾಕೆಂದರೆ ಇವರಿಗೆಲ್ಲ ಆ ಬೆಲೆ ದೊಡ್ಡ ವಿಷಯವಾಗಿರುವುದಿಲ್ಲ.
 
ತಾವು ರೈತರಿಂದ ಕೊಳೆತ ಮತ್ತು ಮಾಗಿದ, ಅಡುಗೆಗೆ ಬಳಸಲು ಯೋಗ್ಯವಲ್ಲದ ಟೊಮ್ಯಾಟೊಗಳನ್ನು ಮಾತ್ರ ಖರೀದಿಸುತ್ತೇವೆ ಅಂತ ಹಸಿ ಸುಳ್ಳೊಂದನ್ನು ಸಂಘಟಕರು ಹೇಳುತ್ತಿದ್ದಾರೆ. ಆ ಕಾರ್ಯಕ್ರಮದ ಪ್ರವೇಶಕ್ಕೆ ನಿಗದಿಪಡಿಸಿರುವ ದರಗಳತ್ತ ಒಮ್ಮೆ ಕಣ್ಣಾಡಿಸಿದರೆ ಸಾಕು ಅವರ ಸುಳ್ಳು ತಾನೇತಾನಾಗಿ ಬಯಲಾಗುತ್ತದೆ. ಟಿಕೆಟ್‌ನ ರೇಟು ಪ್ರತಿ ಮನುಷ್ಯನಿಗೆ ರೂ. ೧೧೯೯/-, ಜೋಡಿಗೆಂದರೆ ರೂ. ೧೯೯೯/-, ಇನ್ನು ವಿಐಪಿ ಪಾಸ್‌ಗೆಂದರೆ ಐದು ಸಾವಿರವನ್ನೂ ದಾಟುತ್ತದೆ. ಈ ಪರಿಯ ದುಡ್ಡು ಕೊಟ್ಟ ಮಂದಿ ಕೊಳೆತ ಟೊಮ್ಯಾಟೊಗಳನ್ನು ಮೈಗೆ ಮೆತ್ತಿಕೊಳ್ಳಲು ಇಷ್ಟಪಡುತ್ತಾರೆಯೆ. ಜನರ ತುತ್ತುಗಳಲ್ಲೆ ಅವರು ಆಟ ಆಡುವುದು ಎಂಬುದರಲ್ಲಿ ಎರಡು ಮಾತು ಬೇಡ.
 
ರೈತನಿಂದ ಖರೀದಿಸುವುದನ್ನೆ ದೊಡ್ಡ ಉಪಕಾರದ ಮಾತಿನಂತಾಡುವ ಇವರಿಗೆ ರೈತನ ಕಾಳಜಿಯ ಅರಿವೇ ಇಲ್ಲ. ಆತ ಬೆಳೆಯುವಾಗ ಒಂದೊಂದು ಕಾಳು ಅಥವಾ ಹಣ್ಣು ಹಾಳಾದಾಗಲು ವ್ಯಥೆಯಿಂದಲೇ ಅದನ್ನು ಆಚೆಗೆ ಎಸೆದಿರುತ್ತಾನೆ. ಮೇಲ್ನೋಟಕ್ಕದು ವ್ಯಾವಹಾರಿಕ ಪ್ರಜ್ಞೆ ಎನಿಸಬಹುದು, ಆದರೆ ಚಪ್ಪಲಿಯನ್ನು ಬೊದದಲ್ಲಿಯೇ ಬಿಟ್ಟು ಹೊಲಕ್ಕಿಳಿಯುವ ಅವನದು ಮಾತ್ರ ತನ್ನ ಶ್ರಮ ವ್ಯರ್ಥವಾದುದರ ಬಗೆಗಿನ ವೇದನೆ ಅದಾಗಿರುತ್ತದೆ. ಹಾಗಿರುವಾಗ ಕೇವಲ ದುಡ್ಡು ದೊರೆತ ಮಾತ್ರಕ್ಕೆ ರೈತ ತನ್ನ ಶ್ರಮ ಹೀಗೆಲ್ಲಾ ಅನ್ಯಾಯಕ್ಕೊಳಗಾಗುವುದನ್ನು ಸ್ವೀಕರಿಸುತ್ತಾನೆಯೆ. ಇದೆಲ್ಲಾ ಅರ್ಥವಾಗುವಷ್ಟು ಮನಸ್ಸಿನವರಾಗಿದ್ದಿದ್ದರೆ ಭಾರತದಂತಹ ದೇಶದಲ್ಲಿ ಅದನ್ನು ಆಯೋಜಿಸುವ ಯೋಚನೆಯನ್ನೆ ಅವರು ಮಾಡುತ್ತಿರಲಿಲ್ಲ.
 
ಸ್ಪೇನ್ ದೇಶದ ಟೊಮ್ಯಾಟಿನೋ ಉತ್ಸವವನ್ನು ನಮ್ಮಲ್ಲಿ ಆಯೋಜಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ದೆಹಲಿಯಲ್ಲಿ ನಡೆಸಲು ಇಂತದೇ ಐಷಾರಾಮಿ ಸಂಘಟಕರು ಸಿದ್ದತೆ ಮಾಡಿಕೊಂಡಿದ್ದಾಗ ಜನ ಬೀದಿಗಿಳಿದು ಪ್ರತಿಭಟಿಸಿದ್ದರು. ಆಗ ಸರ್ಕಾರವೆ ಅದನ್ನು ಬ್ಯಾನ್ ಮಾಡಿತ್ತು. ನಂತರ ಇತ್ತೀಚಿಗಷ್ಟೆ ಯಾವ ಸದ್ದು ಗದ್ದಲವೂ ಇಲ್ಲದೆ ಹೈದ್ರಾಬಾದ್‌ನಲ್ಲಿ ಆಚರಿಸಿಬಿಟ್ಟಿದ್ದಾರೆ. ಅಲ್ಲಿನ ಹುಮ್ಮಸ್ಸೆ ಇದೀಗ ಬೆಂಗಳೂರಿನಲ್ಲಿ ಆಯೋಜಿಸುವಂತೆ ಪ್ರೇರೇಪಿಸಿರಬೇಕು. ದೆಹಲಿಯ ಮಾದರಿಯಂತೆ ಇಲ್ಲೂ ಒಂದು ಅಪಸ್ವರ ಹೇಳದಿದ್ದರೆ ಸದ್ಯದಲ್ಲೇ ಮೈಸೂರಿನಲ್ಲೂ ಟೊಮ್ಯಾಟೊಗಳನ್ನು ಮೈಗೊರೆಸಿಕೊಳ್ಳುವ ಯೋಜನೆಯಲ್ಲಿದ್ದಾರೆ. ಇದರ ವಿರುದ್ಧ ಮೊನ್ನೆ ಆನ್‌ಲೈನ್ ಸಹಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಐದೇ ದಿನದಲ್ಲಿ ಐದು ಸಾವಿರ ಸಹಿಗಳು ಸಂಗ್ರಹವಾಗಿದ್ದವು. ಈ ಸಹಿಗಳೆಲ್ಲ ಬೀದಿ ಧ್ವನಿಯಾಗುವ ಮುನ್ನ ಸರ್ಕಾರವೇ ಇದರತ್ತ ಗಮನಹರಿಸುವುದು ಕ್ಷೇಮ.
 

ಗಿರೀಶ್ ತಾಳಿಕಟ್ಟೆ