ಹನುಮಂತ ಹಾಲಿಗೇರಿಯವರ `ಕೆಂಗುಲಾಬಿ' ಕಾದಂಬರಿಯ ಒಂದು ಭಾಗ

12/02/2012 07:41

 

ನಾನು ಶಾಲೆಗೆ ಹೋಗುತ್ತಿದ್ದರು ಕೂಡ ಅಕ್ಕಳನ್ನು ಅವ್ವ ಯಾಕೋ ಶಾಲೆಗೆ ಸೇರಿಸಿರಲಿಲ್ಲ. ನನಗೆ ಅಕ್ಕಳನ್ನು ಬಿಟ್ಟು ಶಾಲೆಗೆ ಹೋಗಲು ಬಾಳ ಬೇಸರ ಆಗ್ತಿತ್ತು. ನಾನು ಅಕ್ಕಳನ್ನು ಅಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದೆ. ನಾನು ಶಾಲೆಗೆ ಹೋಗೋದಿಲ್ಲ ಎಂದು ಹಟ ಹಿಡಿಯುತ್ತಿದ್ದೆನಾದರು ಅವ್ವ ಅದೆನೇನೋ ಸಮಾಧಾನ ಹೇಳಿ ನನ್ನನ್ನು ಶಾಲೆಗೆ ಕಳುಹಿಸುತ್ತಿದ್ದಳು. ಶಾಲೆಯಲ್ಲಿ ಇರುವಷ್ಟು ಹೊತ್ತು ಅಕ್ಕನ ಧ್ಯಾನದಲ್ಲಿರುತಿದ್ದ ನಾನು ಶಾಲೆ ಬಿಟ್ಟೊಡನೆ ಅಕ್ಕಳೊಂದಿಗೆ ಆಟದಲ್ಲಿ ಸೇರಿಕೊಂಡು ಬೀಡುತಿದ್ದೆ. ಆಗ ಅದೆಷ್ಟೊಂದು ಬಗೆಯ ಆಟಗಳು ಆಡುತ್ತಿದ್ದೆವು. ನಮ್ಮ ಕೇರಿಯಲ್ಲಿ ನನ್ನ ವಾರಿಗೆಯ ಹುಡುಗರಿಗೆಲ್ಲ ನನ್ನಕ್ಕಳೆ ಲೀಡರು. ಅಂಡ್ಯಾಳು, ಮಣಿಪತ್ತು, ಚಕ್ಕಾದೋನಿ, ಹುಲಿಮನಿಯಾಟ, ಲಗೋರಿ, ಕುಂಟಲಿಪ್ಪಿ ಹಿಂಗ ರಗಡ ಆಡ್ತಿದ್ದಿವಿ, ಒಮ್ಮೊಮ್ಮೆ ಗಂಡ ಹೆಂಡತಿ ಆಟದೊಳಗ ಅಕ್ಕ ನಾನು ಗಂಡ ಹೆಂಡತಿಯಾಗಿದ್ದು ನೆನಸ್ಕೊಂಡ್ರ ಈಗಲೂ ನಗು ಬರತೈತಿ.

ಹಿಂಗ ಒಂದು ದಿನ ಅಕ್ಕನ ಕೂಡ ಆಟ ಆಡಬೇಕೂಂತ ಓಡೋಡಿ ಮನೆಕಡೆ ಬಂದೆ. ದಿನ ನಾ ಬರೂದ ಕಾಯ್ಕೋತ ಇರತಿದ್ದ ಅಕ್ಕ ಇವತ್ತ ಮನಿ ಅಂಗಳದಾಗ ಕಾಣಾಕ ಒಳ್ಳು. ನಾನು ಅವಸರದಿಂದ ಮನಿ ಅಂಗಳ ದಾಟಿ ಹಿಂದ ಹಿತ್ತಲದಾಗ ಹಣಕಿ ಹಾಕಿದೆ. ಹಿತ್ತಲದೊಳಗ ಕೋಳಿ ಗೂಡಿನಂತೇಕ ಅಕ್ಕ ಮುದ್ದಾಗಿ ಅಳುಮುಖ ಮಾಡ್ಕೊಂಡು ಕುಂತಿದ್ಲು. ಅಕಿ ಸುತ್ತ ಹಳಿ ಚಪ್ಪಲಿ, ಕುಡಗೋಲು, ನೀರು, ನಿಂಬಿಕಾಯಿ ಇಟ್ಟಿದ್ರು. ನಾನು ಅಕ್ಕನಿಗೆ ಏನೋ ಆಗೇತಿ ಅಂತ ಹಂತ್ಯೇಕ ಹೋದ್ರ ಅಕ್ಕನ ಲಂಗದ ಮ್ಯಾಲೆಲ್ಲ ರಕ್ತ ಅಂಟಕೊಂಡು ಕಾಲಗುಂಟ ಇಳಿತಿತ್ತು. ನಾನು ಅಕಿ ಹಂತ್ಯಾಕ ಹೋಗಿ ’ಯಾಕಕ್ಕ ಎಲ್ಲಾರ ಬಿzನು. ಪೆಟ್ಟ ಬಾಳ ಆಗೇತೇನು. ತೋರ‍್ಸು ನೋಡುನು’ ಎಂದು ಅಳುತ್ತಲೆ ಕೇಳಿದ್ದೆ. ಅಕ್ಕ ನನ್ನ ಮುಖ ನೋಡ್ಕೊಂಡು ಸುಮ್ಮನ ಅಳ್ಳಾಕ ಹತ್ತಿದು. ಅಷ್ಟೊತ್ತಿಗೆ ಎಲ್ಲೊ ಇದ್ದ ಅವ್ವ ಓಡೋಡಿ ಬಂದು ಮುಟ್ಟಬ್ಯಾಡ ಅಕಿನ ದೂರ ಸರಿ ಎಂದು ಜೋರಾಗಿ ಚೀರುತ್ತ ನನ್ನನ್ನು ಈ ಕಡೆ ಕರದ್ಲು. 

ನಾನು ಗಾಬರಿಯಿಂದ ’ಯಾಕಬೆ ಅಕ್ಕಗ ಏನಾಗೇತಿ. ಎಲ್ಯಾರ ಬಿದ್ಲೇನು’ ಅಂತ ಅಳಕೋತ ಅವ್ವಗ ಕೇಳಿದೆ. ಆದರೆ ಖುಷಿಯಲ್ಲಿಯೆ ಅವ್ವ ಅದೆನೋ ತಯಾರಿಯಲ್ಲಿ ಮಗ್ನಳಾಗಿದ್ದಳು. ಅವ್ವನ ಕೂಡ ಇದ್ದ ಮಾಚವ್ವತ್ತಿ ’ಹಾಟ್ಯಾ ಹಳೆ ಹಾಟ್ಯಾ. ಹೆಂಗಸರ ಸುದ್ದಿ ಎಲ್ಲ ಹೇಳಬೇಕನು ನಿನಗ. ಹೋಗು ಹೊರಗ. ಆಟಾ ಆಡಾಕ ಹೋಗು’ ಅಂದು ದಬಾಯಿಸಿ ನನ್ನನ್ನು ಹೊರಗ ಹಾಕಿದ್ದಳು.
ಅವತ್ತ ರಾತ್ರಿ ಸೂಲಗಿತ್ತಿ ಬೂಬಮ್ಮ ಬಂದು ಅಕ್ಕನ ಬಚ್ಚಲದಾಗ ಕೂಡ್ರಿಸಿ ಅರಿಶಿನ ಹರಳೆನ್ನಿ ಹಾಕಿ ಚಲೊತಂಕ ಎರಿಯಾಕ ಹತಿದ್ಲು. ಅವ್ವ ಹೊಯ್ದಾಡುವಂಗ ನೀರು ಕಾಸಿ ಅಕ್ಕನ ತಲಿ ಮ್ಯಾಲ ಹೊಯತಿದ್ಲು. ’ಇನ್ನೇನು ನಿನ್ನ ನಸಿಬು ತೇರಿತುಬಿಡು ತಾರವ್ವ. ಮಗಳ ವಯಸ್ಸಿಗೆ ಬಂದು ಫಲ ಕೊಡುವಂಗ ಆದ್ಲು. ನಿನ್ನನ್ನು ಹಿಡಿಯಾರ ಯಾರಿಲ್ಲ ಇನ್ನ ಮುಂದ. ನಮ್ಮನ್ನೆಲ್ಲಾ ಮರಿಬ್ಯಾಡವಾ’ ಎಂದು ಅವ್ವಳಿಗೆ ಮಾಲಿಸು ಮಾಡುವುದು ಅಲ್ಲಿಯೆ ಇದ್ದ ನನಗೆ ಚನ್ನಾಗಿ ಕೇಳಿಸಿತಾದರೂ ಅದರ ಹಿಂದಿನ ಅರ್ಥ ಆಗ ನನಗೆ ಆಗಿರಲಿಲ್ಲ.

ಎರದಾದ ಮ್ಯಾಲ ಅವ್ವ ನನ್ನನ್ನು ಕರದು ಅಂಗಡ್ಯಾಗಿಂದ ಖರ್ಜೂರ, ಉತ್ತತ್ತಿ, ಒಣ ಕೊಬ್ಬರಿ, ಬೆಲ್ಲ ಸಾಮಾನು ತೊಗೊಂಡು ಬಾ ಅಂತ ಹೇಳಿ ಕೈ ಚೀಲ ಕೊಟ್ಟಳು. ಆದ್ರ ರೊಕ್ಕ ಕೊಡಲಿಲ್ಲ. ‘ಯವ್ವಬೆ ಇವನ್ನೆಲ್ಲ ತರಾಕ ರೊಕ್ಕ...’ ಎಂದು ಕೇಳಿದೆ. ‘ರೊಕ್ಕ ಯಾಕ ಬೇಕೋ ಮಗನ. ನಮ್ಮಕ್ಕ ದೊಡ್ಡಾಕಿ ಆಗ್ಯಾಳಂತ ಹೇಳು ಆ ಗೂಳಪ್ಪ ಶೆಟ್ಟಿಗೆ. ನೀ ಕೇಳಿದ್ದೆಲ್ಲ ತೂಗಿ ಕೊಡತಾನ ಶೆಟ್ಟಿ’ ಎಂದಿದ್ದಳು. ನಾನು ಅವ್ವನ ಮಾತು ನಂಬಲಿಕ್ಕಾಗದೆ ಅಂಗಡಿ ಕಡೆ ಮುಖ ಮಾಡಿದ್ದೆ. ಗೂಳಪ್ಪ ನನ್ನ ಮುಖ ನೋಡಿದ ಗಳೆನ ರೊಕ್ಕ ತೆಗಿ ಎಂದ. ನಾನು ಗಟ್ಟಿ ಮನಸ್ಸಿನಿಂದ ಜೋರಾಗಿ ನಮ್ಮಕ್ಕ ದೊಡ್ಡಾಕಿ ಆಗ್ಯಾಳ ಎಂದಿದ್ದೆ. ಅಂಗಡಿಯೊಳಗ ಕುಂತಿದ್ದ ನಾಲ್ಕಾರು ಜನ ನನ್ನ ಧ್ವನಿ ಕೇಳಿ ಗೊಳ್ಳೆಂದು ನಕ್ಕರು. ಗೂಳಪ್ಪ ಶೆಟ್ಟಿ ನನ್ನತ್ತ ಹುಳ್ಳಹುಳ್ಳಗೆ ನೋಡಿ ನಾ ಹೇಳಿದ ಸಾಮಾನೆಲ್ಲ  ಕಟ್ಟಿ ಕೊಡತೊಡಗಿದ.

ಅಂಗಡಿಯೊಳಗ ಕುಂತಿದ್ದವನೊಬ್ಬ ನನ್ನತ್ತ ಹುಬ್ಬು ಹಾರಿಸಿ ಯಾರಿ ಹುಡುಗ ಎಂದು ಶೆಟ್ಟಿಯನ್ನು ಕೇಳಿದ್ದ. ’ಜೋಗತಿ ತಾರವ್ವನ ಮಗ ಇಂವ’ ಎಂದು ಪೊಟ್ಟಣ ಕಟ್ಟಕೊತನ ಗೂಳಪ್ಪ ಶೆಟ್ಟಿ ಹೇಳಿದ. ಮತ್ತೊಬ್ಬಂವ ’ತಾರವ್ವನ ನಸೀಬು ತೆರಿತ ಹಂಗಾರ. ಹುಡುಗಿ ಕಣ್ಣಿಲೇ ಮೂಗಿಲೆ ಬಾಳ ನೆಟ್ಟಗ ಅದಾಳ’ ಅಂದ. ’ನೆಟ್ಟಗ ಇರಲಾರದ ಏನ ಮಾಡ್ಯಾರಪಾ ಈ ಹುಡುಗರು. ಹೇಳಿ ಕೇಳಿ ತಾರವ್ವ ಗೌಡನ ಇಟ್ಟುಕೊಂಡಾಕಿ’ ಎಂದು ಮತ್ತೊಬ್ಬ ಸಣ್ಣಗೆ ಹೇಳಿದ್ದನಾದರೂ ಅದು ಎಲ್ಲರಿಗೂ ಕೇಳಿಸಿ ಗೊಳ್ಳನೆ ನಕ್ಕಿದ್ದರು.

ಅಕ್ಕಳಿಗೆ ಕೇರಿಯ ಮನೆಗಳವರೆಲ್ಲರೂ ಒಂದೊಂದು ದಿನ ಹುಗ್ಗಿ, ಬಾನ, ಸಜ್ಜಕ ಮುಂತಾದವುಗಳನ್ನು ಮಾಡಿಕೊಂಡು ಎಡಿ ತಂದು ತಿನ್ನಿಸಿ ಹೊಕ್ಕಿದ್ರು. ಅಕ್ಕ ದಿನವೂ ಕೊಬ್ಬರಿ, ಬೆಲ್ಲ, ಉತ್ತತ್ತಿ, ಸಜ್ಜಕ, ತುಪ್ಪ, ಶ್ಯಾಂವಿಗಿ ತಿಂದು ದುಂಡ ದುಂಡಗೆ ಕಾಣತೊಡಗಿದಳು. ನಾನು ಆಕೆ ಕೊಬರಿ ಬೆಲ್ಲ ತಿನ್ನುವಾಗ ಆಕೆಯ ಹತ್ತಿರ ಸುಳಿಯುತ್ತಿದ್ದೆ. ’ಅವ್ವ ಆಕಿನ ಮುಟ್ಟಸಕೊ ಬ್ಯಾಡ. ಮೈಲಿಗೆಯಾಕ್ಕೆತಿ’ ಅಂತ ಬೈಯ್ಯುತಿದ್ಲು. ಆದರೂ ಅಕ್ಕ ಅವ್ವನ ಕಣ್ಣುತಪ್ಪಿಸಿ ಉತ್ತತ್ತಿ ಕೊಬ್ಬರಿ ತುಣುಕುಗಳನ್ನು ಕೊಡುತ್ತಿದ್ದಳು. ಅಕ್ಕ ಆರಾಮ ಇದ್ರೂ ಯಾಕ ನನ್ನ ಕೂಡ ಆಡಾಕ ಬರವಳ್ಳು ಅನ್ನೊದು ನನ್ನ ಚಿಂತೆಯಾಗಿತ್ತು.

ಅಕ್ಕನ್ನ ಎಬ್ಬಸುವರೆಗೂ ಪ್ರತಿದಿನ ಸಂಜೆ ಕೇರಿಯ ಮುತ್ತೈದೆಯರು ಸೇರಿ ಸೋಬಾನ ಪದ ಹೇಳಿ ಆರತಿ ಮಾಡತಿದ್ರು. ೧೩ನೇ ದಿನ ಅಕ್ಕಳನ್ನು ಎಬ್ಬಿಸಿ ಮನೆಯೊಳಗ ಕರಕೊಳ್ಳೋ ದಿನ. ಅಂದು ಇಡೀ ಕೇರಿಯೆ ಸಂಭ್ರಮದಲ್ಲಿ ಮುಳುಗಿದಂತೆ ಕಾಣತಿತ್ತು.

ಅಕ್ಕಗ ಅವತ್ತ ಕಸ್ತೂರಿ ಅರಿಶಿನ ಹಚ್ಚಿ ಮೈ ಕೈಗೆ ಚಲೋತಂಕ ತಿಕ್ಕಿ ಜಳಕ ಮಾಡಿಸಿದರು. ಅಕ್ಕ ಅವತ್ತು ಅರಿಶಿನ ಬಣ್ಣದ ರೇಷಿಮೆ ಸೀರೆ ಅದಕ್ಕೊಪ್ಪುವಂತ ರಕ್ತ ಬಣ್ಣದ ಜಂಪರ್ ತೊಟ್ಟಿದ್ಲು. ಈ ೧೩ ದಿನದೊಳಗ ಅಕ್ಕ ಈ ಒಳ್ಳೊಳ್ಳೆ ಪೌಷ್ಠಿಕ ದಿನಸಾ ತಿಂದಿದ್ದರಿಂದ ಬಾಳ ಚಂದ ಕಾಣತಿದ್ಲು. ಗ್ಯಾಸ್‌ಲೈಟ್ ಬೆಳಕಿನೊಳಗ ನಮ್ಮ ಕೇರಿಯವರೆಲ್ಲ ಉಜ್ಜಳಪ್ಪನ ಗುಡಿಗೆ ಮೆರುಣಿಗಿ ಹೊರಟ್ರು. 
ಈ ೧೩ ದಿನ ಮುಟ್ಟಿಸಿಕೊಳ್ಳದಿದ್ದ ಅಕ್ಕ ಅವತ್ತು ನನ್ನನ್ನು ತನ್ನ ಹಂತ್ಯಾಕ ಕರದು ಮುದ್ದು ಮಾಡಿದ್ದರಿಂದ ನಾನು ಅಕ್ಕನ ಕೈ ಹಿಡಕೊಂಡೆ ಗುಡಿ ಕಡೆ ಹೆಜ್ಜೆ ಹಾಕಿದ್ದೆ. ಊರ ಗಂಡಸರೆಲ್ಲ ತಮ್ಮ ತಮ್ಮ ಕಟ್ಟಿ ಮ್ಯಾಲ ನಮ್ಮಕ್ಕನ ಮೆರುಣಗಿ ನಿಂತು ಒಂದ ನಮೂನಿ ನೋಡಕೋತ ನಿಂತಿದ್ರು. ಅವತ್ತು ಹೋಳಿಗೆ ಅಡುಗೆ ಮಾಡಿ ಊರ ಗೌಡರನ್ನು, ಕುಲಕರ್ಣ್ಯೇರನ್ನು, ನಮ್ಮವ್ವ ಊಟಕ್ಕ ಕರೆಸಿದ್ಲು. ನಮ್ಮಕ್ಕ ಪಡಸಾಲಿಯೊಳಗ ದೀಪದ ಬೆಳಕಿನೊಳಗ ಮುತ್ತ ಹೊಳೆದಂಗ ಹೊಳಕೋತ ಕುಂತಿದ್ಲು. ಗೌಡ್ರು, ಕುಲಕರ್ಣ್ಯೇರು ಒಳ್ಳೆ ಗತ್ತಿನೊಳಗ ಕುಂತಗೊಂಡು ಅಕ್ಕನ ಹುಳು ಹುಳು ನೋಡತಿದ್ರು.

ಅವತ್ತು ಊಟಕ್ಕೆ ಬಂದವರಲ್ಲಿ ಯಾರು ಹೆಚ್ಚು ಆಯೇರಿ ಮಾಡತಾರೋ ಮತ್ತು ಮುಂದ ದೇವರಿಗೆ ಮುತ್ತು ಕಟ್ಟೋ ದಿನ ಯಾರು ಅದರ ಖರ್ಚ ನೋಡಕೋತಾರೊ ಅವರು ನನ್ನಕ್ಕಳೊಂದಿಗೆ ಕೂಡುವ ಮೊದಲ ಗಂಡಸಾಗಲು ಅರ್ಹನಂತೆ. ಅಂತಹ ಗಂಡುಗಳನ್ನು ನಮ್ಮ ಮನೆಗೆ ಕರೆದು ಅವರ ಮುಂದೆ ನಮ್ಮಕ್ಕನ ಹೆಣ್ತನದ ರೂಪವನ್ನು ಪ್ರದರ್ಶನ ಮಾಡುವುದಕ್ಕಾಗಿ ಚಾಣಾಕ್ಷ ನಮ್ಮವ್ವ ಈ ಕಾರಣವನ್ನು ಇಟ್ಟುಕೊಂಡಿದ್ದಳು. ಅವತ್ತು ನಮ್ಮಕ್ಕನ ದರ್ಶನ ಪಡಕೊಂಡೋರೆಲ್ಲ ಯಾವತ್ತು ಉಜ್ಜಳಪ್ಪ ಮುತ್ಯಾನ ಜಾತ್ರಿ ಬರತೈತೋ ಅಂತ ಕಾಯತಿದ್ರು.

ಎಲ್ಲರೂ ಊರಲ್ಲಿ ಇದ್ದುಳ್ಳವರ ದನ ಕಾಯಲು ಮಕ್ಕಳನ್ನು ಕಳಿಸಿದರೆ ನನ್ನ ತಾಯಿ ತಾರವ್ವ ನನ್ನನ್ನು ಶಾಲೆಗೆ ಕಳುಹಿಸತೊಡಗಿದ್ದಳು. ಆದರೆ ಕ್ಲಾಸ್‌ಮೇಟ್ಸು ’ನಿನ್ನ ತಾಯಿ ಸೂಳೆ’ ಎಂದು ಹಂಗಿಸುತ್ತಿದ್ದುದರಿಂದ ಶಾಲೆಯಲ್ಲಿ ಜಾಣನಾಗಿದ್ದರೂ ಕೂಡ ನಾನು ಯಾವಾಗಲೂ ಮಂಕನಾಗಿರುತ್ತಿದ್ದೆ. ಹೈಸ್ಕೂಲಿಗಾಗಿ ಪಕ್ಕದ ಪೇಟೆಯ ಶಾಲೆಗೆ ದಾಖಲಾಗಿದ್ದ ನಾನು, ಅಲ್ಲಿ ಯಾರೂ ನನ್ನ ಜಾತಿ ಮತ್ತು ಅವ್ವನ ವೃತ್ತಿ ಕುರಿತು ಕೇಳುವವರಿಲ್ಲದ್ದರಿಂದ ಸ್ವಲ್ಪ ನೆಮ್ಮದಿಯಿಂದ ಉಸಿರಾಡುವಂತಾಗಿದೆ.

ಹನುಮಪ್ಪ ದೇವರು ಇಡೀ ಭೀಮನಕೊಪ್ಪದ ಗ್ರಾಮದೈವವಾಗಿದ್ದರೆ, ಊರಿನಿಂದ ಒಂದೂವರೆ ಕಿ.ಮೀ.ಗಳಷ್ಟು ದೂರದಲ್ಲಿದ್ದ ಉಜ್ಜಳಪ್ಪ ದೇವರು ಭೀಮನಕೊಪ್ಪದ ದಲಿತಕೇರಿಯ ದೈವನೆನಿಸಿಕೊಂಡಿದ್ದ. ಪ್ರತಿ ಮೂರು ವರ್ಷಕ್ಕೊಮ್ಮೆ ಭೀಮನ ಕೊಪ್ಪದವರಷ್ಟೆ ಅಲ್ಲದೆ ಸುತ್ತಮುತ್ತಲ ಗ್ರಾಮಗಳ ಹೊಲೆ ಮಾದಿಗರು ಈ  ದೈವದ ಜಾತ್ರೆಯನ್ನು ಮಾಡುತ್ತಿದ್ದರು. ಉಜ್ಜಳಪ್ಪ ದೇವರಿಗೆ ಹುಡುಗಿಯರನ್ನು ಬಿಡುವುದರಿಂದ ಹಿಡಿದು, ಕುರಿ ಕೋಣಗಳ ಬಲಿ, ಸಾರಾಯಿ ತೀರ್ಥದ ನೈವೇದ್ಯ ಸೇರಿದಂತೆ ಈ ಜಾತ್ರೆ ತನ್ನದೆಯಾದ ವಿಶೇಷತೆಯನ್ನು ಸುತ್ತಮುತ್ತಲ ಹಳ್ಳಿಗಳಲ್ಲಿ ಪಡೆದುಕೊಂಡಿತ್ತು. ಜಾತ್ರೆಯನ್ನು ಈ ಹಿಂದೆ ತಿಂಗಳಾನುಗಟ್ಟಲೆ ಮಾಡುತ್ತಿದ್ದರಾದರೂ ಈಗಿನವರು ಕಾಲಕ್ಕೆ ತಕ್ಕಂತೆ ಬದಲಾಗಿರುವರಾದರೂ ಒಂದು ವಾರದ ಮಟ್ಟಿಗೆ ಜಾತ್ರಿ ಮಾಡವುದನ್ನು ತಪ್ಪಿಸಿರಲಿಲ್ಲ. ಉಜ್ಜಳಪ್ಪನ ಜಾತ್ರಿಯಂದರೆ ಸುತ್ತಲಿನ ಹತ್ತಾರು ಹಳ್ಳಿಗಳ ಜನ ಚಕ್ಕಡಿ, ಟ್ಯಾಕ್ಟರು, ಸೈಕಲ್, ಮೊಟಾರು ಸೈಕಲ್‌ಗಳಲ್ಲಿ ಕುರಿ ಕೋಣಗಳೊಂದಿಗೆ ಬಂದು ಸೇರುತ್ತಿದ್ದರು.  
ಪ್ರತಿ ಊರನಿಂದಲೂ ಉಜ್ಜಳಪ್ಪನ ಹಿತ್ತಾಳೆ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಗಳು, ಪ್ರತಿ ದವನದ ಹುಣ್ಣಿಮೆಯ ದಿನ ಬಂದು ಸೇರುತ್ತಿದ್ದವು. ಆ ಪಲ್ಲಕ್ಕಿಯ ಮುಂದೆ ಆ ಊರಿನಿಂದ ಬಿಡಲಾಗಿದ್ದ ಕೆಮ್ಮಣ್ಣು, ಸುಣ್ಣದಿಂದ ಸಿಂಗರಿಸಿದ್ದ ಕೋಣ, ಅದರ ಹಿಂದೆ ಸ್ವಚ್ಚವಾಗಿ ಮೈ ತೊಳೆದು, ಕುಂಕುಮ ಭಂಡಾರದಿಂದ ಸಿಂಗರಿದ್ದ ಟಗರು ಮತ್ತು ಹೋತಗಳು, ಅವುಗಳ ಹಿಂದೆ ಕೋಳಿಗಳನ್ನು ಕಾಲು ಕಟ್ಟಿ ಹೆಗಲಿಗೆ ಹಾಕಿಕೊಂಡು, ತಲೆಯ ಮೇಲೆ ಅಂದಿನ ನೈವೇದ್ಯಕ್ಕಾಗಿ ಕಾಳು, ಕಡಿ, ಮಸಾಲೆ ಪದಾರ್ಥಗಳನ್ನು ಹೊತ್ತು ಸಾಗುವ ಜನರು. ಇವರ ಹಿಂದೆ ಪಲ್ಲಕ್ಕಿ, ಅದರ ಹಿಂದೆ ಹಳದಿ ಬಣ್ಣದ ಸೀರೆಯುಟ್ಟು ಮುಖದ ತುಂಬಾ ಭಂಡಾರ ಬಳಿದುಕೊಂಡು ಸಾಗುವ ದೇವರಿಗೆ ಬಿಡಬೇಕಾದ ಹುಡುಗಿಯರು ಹೀಗೆ ಮೆರವಣಿಗೆಯೋಪಾದಿಯಲ್ಲಿ ಸಾಗುವ ಜನರು ’ಕಾಪಾಡಪೋ ಉಜ್ಜಳಪ್ಪ’ ಎಂದು ಘೋಷಣೆಗಳನ್ನು ಕೂಗುತ್ತ ಸಾಗುತ್ತಿದ್ದರು.

ನಾಳೆ ದವನದ ಹುಣ್ಣಿಮೆ ಇರುವಾಗಲೇ ಇಂದು ರಾತ್ರಿ ಉಜ್ಜಳಪ್ಪ ಮುತ್ಯಾನ ಗುಡ್ಡದಲ್ಲಿ ಬಂದಿಳಿಯುತ್ತಿದ್ದ ಹರಿಜನರು ಅಲ್ಲಿಯೇ ತಮ್ಮ ಚಾದಾರು, ಜಮಖಾನೆಗಳನ್ನು ಕಟ್ಟಿ ಟೆಂಟುಗಳನ್ನು ನಿರ್ಮಿಸುತ್ತಿದ್ದರು. ಟೆಂಟುಗಳ ಮುಂದೆ ರಾತ್ರಿಯಲ್ಲ ತಾವು ಅಡುಗೆ ತಯಾರು ಮಾಡುವ ಕೆಲಸವನ್ನು ಸುರುವಿಟ್ಟುಕೊಳ್ಳುತ್ತಾರೆ. ಹೀಗೆ ಅಡುಗೆ ತಯಾರಿಸಲು ಅಲ್ಲಿ ಹಿಂದಿನ ಹಿರೀಕರು ದೊಡ್ಡ ದೊಡ್ಡ ಒಳಕಲ್ಲು ರೊಟ್ಟಿ ಮಾಡುವ ಕಲ್ಲು ಒಲೆಗುಂಡಗಳನ್ನೇ ಹುಗಿದಿದ್ದಾರೆ.

ಬೆಳಗ್ಗೆ ಸೂರ್ಯೋದಯದೊಂದಿಗೆ ಜಾತ್ರೆಯ ಹುರುಪು ಶುರುವಾಗುತ್ತದೆ. ಸುಮಾರು ಹತ್ತಾರು ಕೋಣಗಳು, ನೂರಾರು ಕುರಿ-ಮೇಕೆಗಳು, ಸಾವಿರಾರು ಕೋಳಿಗಳನ್ನು ಹಿಡಿದುಕೊಂಡು ಜನ ದೇವಿಯ ಪಲ್ಲಕ್ಕಿಯ ಹಿಂದೆ ಮೆರವಣಿಗೆ ಹೊರಟು ದೇವಸ್ಥಾನದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಉಜ್ಜಳಪ್ಪನ ಪಾದಗಟ್ಟಿಗೆ ಹೊರಡುತ್ತದೆ. ಅಲ್ಲಿಂದ ಮಧ್ಯಾಹ್ನಕ್ಕೆ ಹೊರಡುವ ಮೆರುಣಗಿ ಗುಡಿಗೆ ಬರುತ್ತದೆ. ಉಜ್ಜಳಪ್ಪನ ಗುಡಿ ಮುಂದೆ ಬಲಿಗಳನ್ನು ಕೊಡಲಾಗುತ್ತದೆ. ಬಲಿ ಕೆಲಸ ಮುಗಿದ ಮೇಲೆ ಉಜ್ಜಳಪ್ಪನ ಅಂತಪುರದೊಳಗೆ ಗುಡಿಯ ಹಿಂದಿರುವ ಶಿಶ್ನ ದೇವರಿಗೆ ಆ ವರ್ಷ ದೇವರಿಗೆ ಬಿಡಬೇಕಾದ ಹುಡುಗಿಯರನ್ನು ಅವರ ತಾಯಂದಿರು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವರನ್ನು ಬೆತ್ತಲೆ ಮಾಡಿ ಈ ಹುಡುಗಿಯರ ಗುಪ್ತಾಂಗಕ್ಕೆ ಆ ದೇವರ ಶಿಶ್ನವನ್ನು ತಾಗಿಸಲಾಗುತ್ತದೆ. ಹೀಗೆ ಮಾಡಿದರೆ ಆ ಉಜ್ಜಳಪ್ಪ ಮುತ್ಯಾನೊಂದಿಗೆ ಅ ಹುಡುಗಿಯರ ಮದುವೆಯಾಯಿತೆಂದು ಅರ್ಥ. ಅಂದು ಅಕ್ಕಳನ್ನು ಉಜ್ಜಳಪ್ಪ ಮುತ್ಯನೊಂದಿಗೆ ಮದುವೆ ಮಾಡುವಾಗ ನಾನು ಅವ್ವನ ಸೊಂಟದ ಮೇಲೆಯೇ ಕುಳಿತು ಅಳುತ್ತಿದ್ದೆ.

ಅಂದು ರಾತ್ರಿ ಟೆಂಟಿಗೆ ಮರಳಿ ಬಂದ ಅಕ್ಕ ಊಟ ಮಾಡುವ ಪ್ರಯತ್ನವನ್ನೇ ಮಾಡದೆ ಹಾಗೆ ಮಲಗಿ ಕೊಂಡಿದ್ದಳು. ಸಾವಿರಾರು ಪ್ರಾಣಿಗಳ ಬಲಿ ಕೊಟ್ಟು, ನೂರಾರು ಹುಡುಗಿಯರನ್ನು ಮದುವೆ ಮಾಡಿ ಉಜ್ಜಳಪ್ಪ ಮುತ್ಯಾನನ್ನು ಶಾಂತ ಮಾಡಿದ ಜನ ರಾತ್ರಿಯೆಲ್ಲ ಹಲವಾರು ನಾಟಕಗಳನ್ನು ಆಡುವುದರಲ್ಲಿ ನೋಡುವುದರಲ್ಲಿ ತಲ್ಲೀನರಾದರು. ನನ್ನವ್ವ ನನ್ನನ್ನೂ ನಾಟಕ ನೋಡಲು ಕರೆದುಕೊಂಡು ಹೋಗಿದ್ದಳು. ಸ್ವಲ್ಪ ಹೊತ್ತಿನಲ್ಲಿ ನನಗೆ ನಿದ್ದೆ ಆವರಿಸಿದ್ದರಿಂದ ಅತ್ತು ಕರೆದು ಮಾಡಿ ಅವ್ವಳೊಂದಿಗೆ ಟೆಂಟಿಗೆ ಮರಳಿದ್ದೆ. ಅವ್ವ ಟೆಂಟಿಗೆ ಬರುವುದನ್ನೇ ಕಾಯುತ್ತಿದ್ದ ಒಂದಿಬ್ಬರು ರೇಷಿಮೆ ಪಟಗದವರು ಎದುರಾಗಿ ಅವ್ವಳೊಂದಿಗೆ ಅದೆನನ್ನೋ ಮಾತನಾಡಿ ಎದ್ದ ಹೋದರು.

ಅವ್ವ ಅಕ್ಕಳನ್ನು ಎಬ್ಬಿಸಿ ಊಟ ಬಡಿಸಿದಳು. ಅಕ್ಕ ತನ್ನ ಮೈಯಲ್ಲಿ ಇಂದು ಪಾಡಿಲ್ಲವೆಂದು ಹೇಳಿ ಉಣ್ಣುವ ಶಾಸ್ತ್ರ ಮುಗಿಸಿ ಅಲ್ಲಿಯೆ ಅಡ್ಡಾದಳು. ನಾನು ಕೂಡ ಅಲ್ಲಿಯೆ ಅಕ್ಕಳನ್ನು ತೆಕ್ಕೆ ಬಡಿದುಕೊಂಡು ಮಲಗಿಕೊಂಡೆ. ಮಧ್ಯ ರಾತ್ರಿ ಅವ್ವ ಯಾರೊಂದಿಗೊ ಮಾತಾಡುವುದು ಕಾಣಿಸಿತು. ಅವರು ಮೊದಲು ಕಂಡ ರೇಷಿಮೆ ಪಟಗದವರೆ ಆಗಿದ್ದರು. ಯಾರ‍್ಯಾರೋ ಗಂಡಸರು ನಮ್ಮ ಟೆಂಟ್ ಮುಂದ ಬೆದಿಗೆ ಬಂದ ನಾಯಿ ಸುತ್ತಿದಂಗ ಸುತ್ತತ್ತಲೆ ಇದ್ದರು.

ಅಕ್ಕ ಮೊಣಕಾಲುಗಳ ಮಧ್ಯೆ ಕೈಯನ್ನಿಟ್ಟುಕೊಂಡು ನಿದ್ದೆಗಣ್ಣಲ್ಲಿ ಇನ್ನೂ ಮುಲುಗುತ್ತಲೆ ಇದ್ದಳು. ಕಲ್ಮರಿಗಳ ಜರಕ್ ಜರಕ್ ಶಬ್ದ ಅವರಿಬ್ಬರು ಒಳ ಬಂದಿದ್ದನ್ನು ಘೋಷಿಸುತ್ತಿತ್ತು. ನಿದ್ರೆಯ ಮಂಪರಿನಲ್ಲಿದ್ದ ನನ್ನನ್ನು ಅವ್ವ ಎತ್ತಿಕೊಂಡು ಹೊರತಂದಳು. ಅಕ್ಕ ಬೇಡ ಬೇಡ ಎಂದು ರೋದಿಸುವುದು ಕೇಳತೊಡಗಿತು. ಅವ್ವ ರೂಪಾಯಿ ನೋಟುಗಳ ಕಟ್ಟೊಂದನ್ನು ಎಣಿಸುತ್ತಿದ್ದಳು. ಅವತ್ತು ಅಕ್ಕ ಐದಾರು ಸಲ ಜೋರಾಗಿ ಚೀರಿದ್ದುದು ನನ್ನ ಗಮನಕ್ಕೆ ಬಂತು. ಆಕೆ ಚೀರಿದಾಗಲೊಮ್ಮೆ ನಾನು ಅವ್ವನತ್ತ ನೋಡುತ್ತಿದ್ದೆ. ಅವ್ವನ ಕೈಯಲ್ಲಿನ ರೊಕ್ಕ ನನ್ನನ್ನು ನೋಡಿ ಲಕ ಲಕ ಎಂದು ನಗುತ್ತಿತ್ತು.  

ಹಿಂಗ ಅಕ್ಕನ್ನ ದೇವರಿಗೆ ಯಾಕ ಬಿಡಬೇಕು? ಮೂಕ ಪ್ರಾಣಿಗಳನ್ನು ಬಲಿ ಯಾಕ ಕೊಡತಾರ ಅಂತ ನಾನು ನನ್ನೊಳಗ ಸಾಕಷ್ಟು ಸಲ ಪ್ರಶ್ನೆ ಮಾಡಕೊಂಡು ತೆಲಿ ಕೆಡಿಸಿಕೊಂಡಿದ್ದೆ. ಅವತ್ತು ರಾತ್ರಿ ಅವ್ವ ಮಲಕೊಂಡಾಗ ಆಕಿಗೆ ಕೇಳಿದರ ’ಉಜ್ಜಳಪ್ಪ ಮುತ್ಯಾ ನಮ್ಮ ದ್ಯಾವರು. ಅಂವಗ ಬಲಿ ಕೊಡಲಿಲ್ಲಂದ್ರ ನಾವು ಭೂಮಿ ಮ್ಯಾಲ ಬದುಕೊದು ಕಷ್ಟ ಅಕ್ಕೆತಿ. ಅದಕ್ಕಂತ ಹಿಂದಿನಿಂದ ಹಿರ‍್ಯಾರು ಮೂರು ವರ್ಷಕೊಮ್ಮಿ ಈ ಪದ್ದತಿ ಮಾಡಕೊಂಡ ಬಂದಾರ. ನಾವು ಸೈತ ಈ ಪದ್ದತಿ ತೆಪ್ಪಸಬಾರದು. ಹಿಂಗ ಬಲಿ ಕೋಡೊದ್ರಿಂದ ಆತ ನಮ್ಮ ಜಡ್ಡು ಜಾಪತ್ರೆಗಳನ್ನು ದೂರ ಮಾಡಿ, ಚಲೋತಂಗ ನೋಡ್ಕೋತಾನ’ ಅಂದಿದ್ಲು.

ರಾತ್ರಿಯಲ್ಲ ಈ ದೇವರುಗಳು ಬಗ್ಗೆ ತಲೆ ಕೆಡಿಸಿಕೊಂಡಿದ್ದ ನಾನು ಹರ‍್ಯಾಗ ಅದೆ ಚಿಂತ್ಯಾಗ ಸಾಲಿಗೆ ಹೋಗಿ ತನ್ನ ನೆಚ್ಚಿನ ಛಲವಾದಿ ಮೇಸ್ಟ್ರ ಹಂತ್ಯಾಕ ಕೇಳಿದ್ದೆ. ಛಲವಾದಿ ಮೇಸ್ಟ್ರು ಈ ಹಿಂದ ಕೆಲಸ ಮಾಡುತ್ತಿದ್ದ ಹಳ್ಳಿಯಲ್ಲಿ ಈ ಬಗ್ಗೆ ಒಂದು ದೊಡ್ಡ ಕಥಿನ ಮಾಡಿ ಬಂದವರು. ಛಲವಾದಿಯವರು ಈ ದೇವರು, ಧರ್ಮ, ಜಾತಿಗಳ ಬಗ್ಗೆ ಬಾಳಷ್ಟು ಅಧ್ಯಯನ ಮಾಡಿ ಸಾಕಾಗಿ, ``ಈ ದೇವರುಗಳು ಅನ್ನೊದು ಇಲ್ಲವೇ ಇಲ್ಲ. ಇಲ್ಲದ ದೇವರಗಳ ನೆಪದಲ್ಲಿ ತನ್ನ ಸ್ವಾರ್ಥವನ್ನು ತೀರಿಸಿಕೊಳ್ಳುವ ಪುರೋಹಿತಶಾಹಿಗಳ ಹುನ್ನಾರ ಇದರಲ್ಲಿ ಐತಿ. ಇಲ್ಲದ ದೇವರಗಳ ಬಗ್ಗೆ ತಲೆ ಕೆಡಿಸ್ಕೊಂಡಿರದನ್ನು ಬಿಟ್ಟು ದೇವರು ಧರ್ಮಗಳ ಭ್ರಮೆಯಲ್ಲಿರುವ ಈ ಕೇರ‍್ಯಾಗ ಜೀವಂತ ಇರೋ ದೇವರಗಳಿಗೆ ಜ್ಞಾನ ನೀಡೋದು ಮುಖ್ಯ...'' ಅಂತ ಕುಂಡ್ರಿಸಿಕೊಂಡು ಏನೇನೋ ಅವತ್ತು ಹೇಳಿದ್ದರು. ಅಂದಿನಿಂದ ನನಗೆ ಅವರೊಬ್ಬ ಆತ್ಮೀಯ ಹಿರಿಯಣ್ಣನಾಗಿ ಕಂಡಿದ್ದರು.

ನಾನು ಪಿಯುಸಿ ಓದುತಾ ಇದ್ದೆ. ನನಗಾಗ ನನ್ನ ಮನೆಯಲ್ಲಿ ಮಲಗುವುದೆ ಬಾಳ ಕಷ್ಟ ಅನಿಸುತ್ತಿತ್ತು. ದಿನಾಲು ಅಕ್ಕನೊಂದಿಗೆ ಲಲ್ಲೆ ಹೊಡೆಯಲು ಬರುವ ಗಿರಾಕಿಗಳನ್ನು ನೋಡಿ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತೆ ಹಲ್ಲು ಮಸೆದುಕೊಂಡು ನನ್ನ ಓದುವ ರೂಮಿಗೆ ಹೋಗುತ್ತಿದ್ದೆ. ಮತ್ತೇನಾದರೂ ಸಹಿಸಬಹುದಾಗಿತ್ತು, ಮನೆ ನಡೆಸಲು ಮತ್ತು ನನ್ನನ್ನು ಓದಿಸಲು ನನ್ನಕ್ಕ ಊರ ಶ್ರೀಮಂತರ ಮಕ್ಕಳಿಗೆ ಸೆರಗು ಹಾಸಬೇಕಂಬುದು ನನಗ ಕಲ್ಪಿಸಿಕೊಳ್ಳಲು ಸಾಧ್ಯವಾಗದ ವಿಷಯವಾಗಿತ್ತು. ಕೆಲವೊಮ್ಮೆ ನಾನು ಸಾಲಿ ಬಿಟ್ಟು ಯಾವುದಾದರೂ ’ಕೆಲಸಕ್ಕ ಹೊಕ್ಕಿನಿ ಅಕ್ಕನ್ನ ಹುಡ್ಕೊಂಡು ಯಾರೂ ನಮ್ಮನಿಗಿ ಬರೋದು ಬ್ಯಾಡ' ಅಂತ ಅವ್ವಳೊಂದಿಗೆ ಜಗಳ ತೆಗಿತ್ತಿದ್ದೆ. ಆಗೆಲ್ಲ ಅವ್ವ ತನ್ನ ಶ್ಯಾಣಾತನವನ್ನೆಲ್ಲ ಖರ್ಚು ಮಾಡಿ `ನೋಡು ಮಗ ಈಗ ಮಗಳ ಬಾಳ ಅಂತೂ ಹಾಳಾಗೆತಿ. ಮೊದಲು ನಿನ್ನ ಬದುಕು ಶುದ್ಧ ಮಾಡಕೋ. ನೀನು ನಾಲ್ಕಕ್ಷರ ಕಲ್ತು ಸರಕಾರದ ಅನ್ನ ಉಣ್ಣುವಂಗ ಆದ್ರ ಆಗ ನಮ್ಮ ಮನಿಗೆ ಯಾರನ್ನೂ ಬರಗೊಡುದಿಲ್ಲ’ ಅಂತ ಬುದ್ಧಿ ಮಾತು ಹೇಳತಿದ್ಲು.

ಅಂತ ಸಮಯದೊಳಗ ಮತ್ತೊಮ್ಮೆ ಊರ ಉಜ್ಜಳಪ್ಪನ ಜಾತ್ರಿ ಬಂದಿತ್ತು. ಈ ಸಲದ ಜಾತ್ರಿಯೊಳಗ ಹ್ಯಾಂಗಾರು ಮಾಡಿ ಹುಡುಗಿಯರನ್ನು ದೇವರಿಗೆ ಬಿಡೋದನ್ನು, ಪ್ರಾಣಿ ಬಲಿ ಕೋಡೊದನ್ನು ತಪ್ಪಿಸಬೇಕಂತ ನಿರ್ಧಾರ ಮಾಡಿ ಬಿಟ್ಟಿದ್ದೆ. ಈ ಬಗ್ಗೆ ಕೇರಿಯ ನಾಲ್ಕೆದು ಹೈಕಳುಗಳಿಗೆ ಉಜ್ಜಳಪ್ಪನ ವಿರುದ್ಧದ ನನ್ನ ಮಸಲತ್ತನ್ನು ಹೇಳಿ ಅವರನ್ನು ಜಾತ್ರಿ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸತೊಡಗಿದೆ. 

ಇದು ನಮ್ಮ ದ್ಯಾವರು ಉಜ್ಜಳಪ್ಪ ಮುತ್ಯಾನ ವಿರುದ್ಧದ ಮಸಲತ್ತು ಅನಕೊಂಡು ಹುಡುಗರು ನನ್ನ ಸುತ್ತ ಸುಳಿಯುವುದನ್ನೇ ಬಿಟ್ಟು ಬಿಟ್ಟಿದ್ದರು. ಆದ್ರ ೭ನೆಯತ್ತೆ ಮಟ ನನ್ನ ಕೂಡ ಸಾಲಿ ಕಲಿತಿದ್ದ ದುರಗ್ಯಾ ಮಾತ್ರ ನನ್ನ ವಿಚಾರಗಳಿಗೆ ಸ್ಪಂದಿಸಿದ. `ಹೌದು ಮಲ್ಯಾ ನೀ ಏನ ಮಾಡು ನಿನ್ನ ಬೆನ್ನಿಗೆ ಇರತೇನಿ ನಾನು’ ಅಂದಿದ್ದ. ಇದೆ ಚಿಂತಿಯಲ್ಲಿ ಅಡ್ಡಾಡುತ್ತಿದ್ದಾಗ ನಮಗೆ ನಮ್ಮ ಕಾಲೇಜು ಪಕ್ಕದಲ್ಲಿದ್ದ ಫೋನ್‌ಬೂತ್ ನೋಡಿದ ಕೂಡಲೆ ಒಂದು ಐಡಿಯಾ ಹೊಳೆದುಬಿಡ್ತು. ಈಬ್ಬರು ಮಾತಾಡಿಕೊಂಡು ಸುತ್ತಮುತ್ತ ನೋಡಿದವರೆ ಫೋನ್‌ಬೂತ್ ಒಳಗೆ ಹೋಗಿ ಪೊಲೀಸ್ ಠಾಣೆಗೆ ಪೋನ್ ಮಾಡಿದೆವು. ’ಸಾರ್ ನನ್ನ ಹೆಸರು ರಂಗನಾಥ್ ಅಂತ. ನಾನು ಇಂಥ ಊರಿನ ಇಂಥ ಯುವಕ ಸಂಘದ ಅಧ್ಯಕ್ಷ ಅದೆನಿ. ನಮ್ಮ ಊರಾಗ ಇಂತ ದಿನ ಉಜ್ಜಳಪ್ಪನ ಜಾತ್ರ್ಯಾಗ ಸಣ್ಣ ಹುಡುಗ್ಯಾರಿಂದ ಬೆತ್ತಲೆ ಸೇವೆ, ಅವರನ್ನು ದೇವರಿಗೆ ಬೀಡೋದು, ಮತ್ತು ಕುರಿ, ಕೋಣ ಬಲಿ ಕೊಡುವಂತಹ ಅನಾಚಾರಗಳು ಇನ್ನು ನಡಿತಾವು. ಈವೆಲ್ಲ ಕಾನೂನು ಪ್ರಕಾರ ಅಪರಾಧ ಅಂತ ನಿಮಗ ತಿಳದ ಮಾತ ಐತಿ. ಆದುದರಿಂದ ನೀವು ಬಂದು ತಡಿರಿ. ಇಲ್ಲಂದ್ರ ನಾನು ಕೋರ್ಟಿಗೆ ಹೋಗ್ತಿನಿ’ ಅಂತ ಒಂದೇ ಉಸಿರಿಗೆ ಹೇಳಿ ಪೋನು ಕುಕ್ಕಿದೆ. ನಂತರ ನಾವಿಬ್ಬರೂ ಅತ್ತಿತ್ತ ನೋಡಿ ಊರ ಬಸ್ ಹತ್ತಿದೆವು. ಆದರೆ ದುರಗ್ಯಾ ಫೋನ್ ಮಾಡಿದ ಮೇಲೆ ಮಂಕಾಗಿಯೇ ಕುಳಿತಿದ್ದ. ನಾನು ’ಯಾರು ನೋಡಿಲ್ಲ, ಹೆದರಬೇಡ’ ಎಂದು ಅವನನ್ನು ಸಮಾಧಾನಿಸಲು ನೋಡಿದೆ. ಆದರೆ, ಆತ ’ಯಾರು ನೋಡಿಲ್ಲ ಖರೆ ಆದ್ರ ಆ ದೇವರು ನೋಡಿರತಾನ’ ಅಂದ. `ದೇವರು ಧರ್ಮ ಅನ್ನೋದು ಸುಳ್ಳು, ಏನಾಗಂಗಿಲ್ಲ ಧೈರ್ಯದಿಂದಿರು' ಎಂದು ನಾನು ನನಗೆ ತಿಳಿದ ವೇದಾಂತ ಹೇಳಿ ಸುಮ್ಮನಾಗಿಸಿದೆ.