ತಾಜಾ ಹುಲ್ಲಿನ ಹಾಗೆ ವೈಯೆನ್ಕೆ ಕವಿತೆ
20/09/2010 14:02
ಪತ್ರಿಕೋದ್ಯಮದ ಆರಂಭದ ಕಾಲದಲ್ಲಿ ಪತ್ರಿಕೆಗಳು ಕೇವಲ ವರದಿಗಾರಿಕೆಯೊಂದೇ ತಮ್ಮ ಮುಖ್ಯ ಗುರಿಯಾಗಿಸಿಕೊಂಡಿದ್ದವು. ನಂತರದ ವಿಕಸನ ಕಾಲದಲ್ಲಿ ಹಲವು ಕ್ರಿಯಾಶೀಲ ಬರಹದ ರೂಪಗಳಿಗೆ ನಾಂದಿಯಾಯಿತು. ಪತ್ರಿಕೆಗಳು ಒಂದು ರೀತಿಯಲ್ಲಿ ಚರ್ಚೆಯ ವೇದಿಕೆಯಾದವು. ಪತ್ರಿಕೆಗಳಲ್ಲಿ ಸಾಹಿತ್ಯ, ವಿಮರ್ಶೆ, ಸಂಪಾದಕೀಯ ಮುಂತಾದ ಬರಹದ ರೂಪಗಳು ಮಹತ್ವ ಪಡೆದುಕೊಂಡವು. ಪ್ರಸ್ತುತ ದಿನಗಳಲ್ಲಿ ಅಂಕಣ ಸಾಹಿತ್ಯವು ಹೆಚ್ಚು ಸಹೃದಯ ಪ್ರಿಯ ಬರಹದ ವಿಧಾನವಾಗಿದೆ.
ಕನ್ನಡದ ಮಟ್ಟಿಗೆ ಅಂಕಣವು ಪತ್ರಿಕೆಯ ಒಂದು ಮನೋಧರ್ಮವಾಗಿದೆ. ಇಂದು ಬಹುತೇಕ ಸಣ್ಣ ಹಾಗೂ ದೊಡ್ಡ ಪತ್ರಿಕೆಗಳು ಅಂಕಣಗಳನ್ನು ಪ್ರಕಟಿಸುವುದನ್ನು ನೋಡಬಹುದು. ಲಂಕೇಶರ ’ಟೀಕೆ-ಟಿಪ್ಪಣ’, ಟಿ.ಎಸ್.ಆರ್‌ರ ’ಛೂಬಾಣ’, ಹಾ.ಮಾ. ನಾಯಕರ ’ಸ್ವ್ವಗತ’ ಪಾಟಿ ಪುಟ್ಟಪ್ಪರ ಅಂಕಣಗಳು ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣ ಸಾಹಿತ್ಯದ ಒಂದು ಮಾದರಿಯನ್ನೇ ಸೃಷ್ಟಿಮಾಡಿವೆ. ಈ ಮಾದರಿ ಸೃಷ್ಟಿಯಲ್ಲಿ ವೈಯೆನ್ಕೆಯವರ ವಂಡರ್‌ಗಣ್ಣು ಒಂದು.
ವೈಯೆನ್ಕೆ ಅಂಕಣದ ಹೊರತಾಗಿ ಬರೆದಿದ್ದು ಕಡಿಮೆ, ಬರೆಸಿದ್ದೆ ಜಾಸ್ತಿ. ಅವರ ವಂಡರ್‌ಗಣ್ಣು ಅಂಕಣ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾಗುತ್ತಿದ್ದು,ತನ್ನದೇ ಆದ ವಿಶಿಷ್ಟ ಓದುಗ ವರ್ಗವನ್ನು ಹೊಂದಿತ್ತು. (ಭಟ್, ೧೯೯೯)
ವೈಯೆನ್ಕೆಯವರು ಅಂಕಣ ಬರಹದಂತೆ ಇತರೆ ಕೆಲವು ಕವಿತೆಗಳು ಭಾಷೆಯ ವಿನೋಧವನ್ನು ಸೃಷ್ಟಿಸುವುದರ ಮೂಲಕ ಗಂಭೀರ ಚಿಂತನೆಯ ವಿಷಯದ ಚರ್ಚೆಯನ್ನು ನೆಡೆಸುವಂತೆ ಪ್ರೇರೆಪಿಸುತ್ತಿದ್ದವು. ಕವಿ ಕೀರ್ತಿನಾಥ ಕುರ್ತಕೋಟಿ ವೈಯೆನ್ಕೆ ಬರಹದ ಕುರಿತು ಹೀಗೆ ಹೇಳುತ್ತಾರೆ, ’ವೈಯೆನ್ಕೆ ಅವರ ಕಾವ್ಯದಲ್ಲಿ ಬಹುಪಾಲು ಹಾಸ್ಯಹುಟ್ಟುವುದು ಅಲ್ಲಿಯ ಅನಿರೀಕ್ಷಿತ ಪ್ರಾಸಗಳಿಂತ,ಅಲ್ಲಿನ ಸನ್ನಿವೇಶಗಳಿಂದ. ವೈಯೆನ್ಕೆ ಅವರಿಗೆ ಭಾಷೆಯ ಮೇಲೆ ಹೆಚ್ಚು ಹಿಡಿತವಿತು’. ವಿಮರ್ಶಕ ಡಿ.ಆರ್.ನಾಗರಾಜ್ ಹೇಳುವಂತೆ, ’ವೈಯೆನ್ಕೆಯವರ ಈ ಮಾದರಿಯ ವಿಶೇಷತೆ ಎಂದರೆ ಭಾಷೆ ಜೊತೆಗಿನ ನಾಟ್ಯಾತ್ಮಕ ಸಂಬಂಧ’ ಮುಂದುವರೆದು ಅವರ ಟಿ.ಎಸ್.ಆರ್ ಮತ್ತು ಖಾದ್ರಿ ಶಾಮಣ್ಣರೊಂದಿಗೆ ವೈಯೆನ್ಕೆಯವರ ವಿಶೇಷತೆಯನ್ನು ಗುರುತಿಸುತ್ತಾರೆ. (ಭಟ್, ೧೯೯೯)
ವೈಯೆನ್ಕೆ ಅವರ ಬರಹದಲ್ಲಿ ಸಹಜ ಗಾಂಭೀರ್ಯ ಇಲ್ಲದಿದ್ದರೂ, ಅವುಗಳ ವಿಚಾರದಲ್ಲಿ ಗಂಭೀರ ಪರಿಣಾಮ ಹೆಚ್ಚು. ಅವರು ಎಂದೂ ಇತರ ಬರಹಗಾರರಂತೆ ಅಂಕಣ ಹೀಗೆ ಇರಬೇಕು ಎಂದು ಕಟ್ಟು ಪಾಡು ಪಾಲಿಸಿದವರಲ್ಲ. ಇನ್ನು ವೈಯೆನ್ಕೆ ಅವರು ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಅವರು ಬರೆಯಬಹುದಾದಷ್ಟು ಬರೆದಿಲ್ಲ. ಪ್ರಜಾವಾಣಿಯಿಂದ ನಿವೃತ್ತಿಯನ್ನು ಹೊಂದಿದಾಗ ಹಲವಾರು ಕವಿತೆಗಳನ್ನು ಬರೆದರು. ವೈಯೆನ್ಕೆ ಅವರು ಪತ್ರಿಕೋದ್ಯಮದಂತೆ ಸಾಹಿತ್ಯವನ್ನು ಆಸಕ್ತಿಯಿಂದ ನೋಡಿದವರು. ಕನ್ನಡ ಸಾಹಿತ್ಯದ ನವ್ಯದ ಬೆಳವಣಿಗೆಯ ಆಧ್ವರ್ಯರಂತ, ವೈಯೆನ್ಕೆಯವರಿಗೆ ಸಾಹಿತ್ಯದ ನಂಟು ಚಿಕ್ಕ ವಯಸ್ಸಿನಲ್ಲಿಯೇ ಆಗಿದ್ದು, ಟಿ. ಪಿ ಕೈಲಾಸಂ ಅವರ ಸಾಹಿತ್ಯವನ್ನು ಅಪಾರ ಆಸಕ್ತಿಯಿಂದ ಓದಿಕೊಂಡವರು. ’ಸತತವಾಗಿ ಅಂಕಣಗಳನ್ನು ಬರೆಯುತ್ತಾ ಬಂದಾಗ ಅದೊಂದು ಯಾಂತ್ರಿಕ ಕರ್ಮವೇ ಆಗಿಬಿಟ್ಟು ಅವು ತಮ್ಮ ಸ್ವಾರಸ್ಯ ಸೌಂದರ್ಯವನ್ನು ಕಳೆದುಕೊಳ್ಳುವ ಅಪಾಯ ಎದುರಾಗುವುದುಂಟು (ನಾಯಕ,೨೦೦೩) ಇಂತಹ ಅಪಾಯದಿಂದ ವೈಯೆನ್ಕೆಯವರ ಬರಹಗಳು ಬಹುತೇಕವಾಗಿ ಪಾರಾಗಿವೆ.
’ವೈ.ಎನ್.ಕೆ ಕಾವ್ಯ ಪ್ರಪಂಚ’ ಎಂಬ ಲೇಖನದಲ್ಲಿ ಸಾಹಿತಿ ಪಿ.ಶ್ರೀನಿವಾಸ ವೈಯೆನ್ಕೆಯರ ಸಾಹಿತ್ಯದ ಕುರಿತು ಹೀಗೆ ಹೇಳುತ್ತಾರೆ. ಈ ಬರವಣಿಗೆ ನನಗೆ ನಿಜಕ್ಕೂ ಪ್ರಿತಿಯ, ಹೆಮ್ಮೆಯ ಸಂತೋಷದ ಕೆಲಸ ವೈಯೆನ್ಕೆ ರಚಿಸಿರುವ ಕಾವ್ಯ ಪ್ರಪಂಚ ಮನೋರಂಜಿತ ಹಾಗೂ ಶಕ್ತಿಯುತ. ಹಲವಾರು ಮುಖ್ಯ ಮನುಷ್ಯ ಸತ್ಯಗಳನ್ನು ಲವಲವಿಕೆಯಿಂದ ಸ್ಪಷ್ಟ ಮಾಡುತ್ತದೆ. (ಸುಂದರ್, ೨೦೦೬)
ಖ್ಯಾತ ಸಾಹಿತಿ ನಾ.ಡಿಸೋಜ ವೈಯೆನ್ಕೆಯವರ ಬರಹದ ವಿಶೇಷತೆ ಕುರಿತು ಹೇಳುವಂತೆ ದಿನ ನಿತ್ಯದ ಸುದ್ದಿಗಳು ಅವಸರ ಅವಸರದಲ್ಲಿ ಬರುವಾಗ ಅವುಗಳನ್ನು ಓದುಗರಿಗೆ ನೀಡುವ ಧಾವಂತದಲ್ಲಿ ಪತ್ರಕರ್ತ ಈ ಸುದ್ದಿಗಳ ಆಚೆ, ಈಚೆಗೆ ಕಣ್ಣು ಹಾಯಿಸದಷ್ಟು ಬಿಸಿಯಾಗಿರುತ್ತಾರೆ. ಆದರೆ ವೈಯೆನ್ಕೆ ಈ ಮಾತಿಗೆ ಅಪವಾದವಾಗಿದ್ದರು. (ಸುಂದರ, ೨೦೦೬)
’ಮಾತು ಮಾತು ಮಥಿಸಿ ಬಂದ ನಾದದ ನವನೀತ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತೆ.
(ಸುಂದರ, ೨೦೦೬)
ಎಂಬ ಸ್ವತ: ವೈಯೆನ್ಕೆಯವರ ಕವಿತೆಯಂತೆ ಅವರ ಬರಹಗಳು ಸ್ವಾರ್ಥವಿಲ್ಲದ, ನಿಸ್ವಾರ್ಥ ಭಾವಗೀತದಂತೆ, ಭಾರಯುತ ಭಾಷೆಯಿಂದ ದೂರ ಉಳಿದು ಬರೆದವರು.
ವೈಯೆನ್ಕೆ ಯಾವುದೇ ’ಇಸಂ’(ಸಿದ್ದಾಂತ)ವನ್ನು ನಂಬಿಕೊಂಡವರಲ್ಲ, ಆ ಕಾಲದಂತೆ ಅವರು ತಮ್ಮ ಬದುಕಿನ ಸಿದ್ದಾಂತ ಅರಿತಿದ್ದರು. ಪತ್ರಕರ್ತರಾಗಿ ಕನ್ನಡದ ಎರಡು ಜನಪ್ರಿಯ ದಿನಪತ್ರಿಕೆಗಳ ಸಂಪಾದಕರಾಗಿ ಅಪಾರ ಗೌರವವನ್ನು ಸಂಪಾದಿಸಿದಾಗಲೂ ವೈಯೆನ್ಕೆ ಯಾರ ಹಿಂದೆಯೂ ಹೋಗಲಿಲ್ಲ. ಯಾವ ಪಕ್ಷವನ್ನು ಬೆಂಬಲಿಸಲಿಲ್ಲ. ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಮಾಡಿಕೊಳ್ಳಲಿಲ್ಲ, ಬದಲಿಗೆ ಅವರ ನಡಿಗೆಯಂತೆ ಬರವಣಿಗೆ ಕೂಡ ಸರಾಗವಾಗಿತ್ತು.
ಕವಿ ಬಿ.ಆರ್.ಲಕ್ಷ್ಮರಾವ್, ಗಿರೀಶ್ ರಾವ್(ಜೋಗಿ) ಸೇರಿದಂತೆ ಅನೇಕ ಪ್ರಸಿದ್ದ ಕವಿಗಳಿಗೆ, ಸಿನಿಮಾ ನಿರ್ದೇಶಕರಿಗೆ, ನಾಟಕಕಾರರಿಗೆ ವೈಯೆನ್ಕೆಯವರ ವೈಕ್ತಿತ್ವದ ಪ್ರಭಾವವಾಗಿರುವುದನ್ನು ನಾವು ಸ್ಮರಿಸಿಕೊಳ್ಳಬಹುದು. ಕನ್ನಡದಲ್ಲಿ ಪತ್ರಿಕೋದ್ಯಮ ಕುರಿತಂತೆ ಪುಸ್ತಕಗಳು ಬರದೇ ಇದ್ದ ಸಂದರ್ಭದಲ್ಲಿ ’ಇದು ಸುದ್ದಿ,ಇದು ಸುದ್ದಿಯಲ್ಲ’ ಎಂಬ ಕೃತಿಯನ್ನು ರಚಿಸಿದರು. ಆ ಮೂಲಕ ತಮ್ಮ ವೃತ್ತಿ ಬದುಕಿನ ಕಾಣಿಕೆಯಾಗಿ ನೀಡಿದರು (ಭಟ್, ೧೯೯೯)
ಕವಿ ಚಂದ್ರಶೇಖರ್ ಕಂಬಾರರು ಒಂದು ಕವಿತೆಯಲ್ಲಿ ವೈಯೆನ್ಕೆಯವರು ಬರಹ, ಕವಿತೆಯ ಆಂತರ್ಯ್ಯವನ್ನು ಹೀಗೆ ಹಿಡಿದಿಟ್ಟಿದ್ದಾರೆ.
ತಾಜಾ ಹುಲ್ಲಿನ ಹಾಗೆ ವೈಯೆನ್ಕೆ ಕವಿತೆ
ಹುಲ್ಲು ಪ್ರೀತಿಸಲಿಕ್ಕೆ ಕಷ್ಟಪಡಬೇಕೆ?
ಕಣ್ಣು ತೆರೆಯುವುದಷ್ಟೇ ನಿಮ್ಮ ಕೆಲಸ
ಉಳಿದ್ದನ್ನು ಅದೇ ಮಾಡುತ್ತದೆ.
(ಪದ್ಯ ಇಷ್ಟು ಲೈಟ್ ಆದ್ರೆ ಹೇಗೆ ಸ್ವಾಮಿ? ಕವನ ಸಂಕಲನದಿಂದ)
ಕನ್ನಡ ಪತ್ರಿಕಾರಂಗದಲ್ಲಿ ವೈಯೆನ್ಕೆಯವರ ಹೆಸರು ಚಿರಪರಿಚಿತ, ಅವರ ವೃತ್ತಿ ಮತ್ತು ಪ್ರೌವೃತ್ತಿ ಎರಡು ಬರಹವೇ ಆಗಿದ್ದು, ಆಸಕ್ತಿಯ ಕ್ಷೇತ್ರಗಳು ಹಲವು. ಇಂತಹ ಶ್ರೇಷ್ಠ ಪತ್ರಕರ್ತ, ಅಂಕಣಕಾರನ ಕುರಿತು ಅನೇಕ ಬರಹಗಾರರು, ಕವಿಗಳು, ಪತ್ರಕರ್ತರು ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಬದುಕಿನ ಕುರಿತು ಬರೆದಿದ್ದಾರೆ.
ವಿಮರ್ಶಕ ಜಿ.ಎಸ್.ಅಮೂರರು ತಮ್ಮ ’ಮಾತು ಮಾತು ಮಥಿಸಿ’ ಎಂಬ ಲೇಖನದಲ್ಲಿ ವೈಯೆನ್ಕೆಯವರ ಬರಹ-ವ್ಯಕ್ತಿತ್ವ ಕುರಿತು ಹೀಗೆ ಹೇಳುತ್ತಾರೆ. ವೈಯೆನ್ಕೆ ಅಪರೂಪದ ವ್ಯಕ್ತಿ, ಅಪರೂಪದ ಬರಹಗಾರ, ಅವರಲ್ಲಿ ನಾನು ಬಹುವಾಗಿ ಮೆಚ್ಚಿದ ಅಂಶ ಗುಣಮುಕ್ತತೆ, ಅವರ ಆಸಕ್ತಿಗಳು ಹಲವಾರು. ರಾಜಕೀಯ, ಸಿನಿಮಾ, ಸಾಹಿತ್ಯ, ಪ್ರವಾಸ ಹೀಗೆ ಅವುಗಳನ್ನು ಹೆಸರಿಸುತ್ತ ಹೋಗಬಹುದು.
ಕವಿ ಕೆ.ಎಸ್.ನ ’ಕಾಲಕ್ರೀಡೆ’ ಸಂಕಲನದಲ್ಲಿ ಅದರ ವೈಶಿಷ್ಟ್ಯತೆ ಕುರಿತು ಹೀಗೆ ಹೇಳುತ್ತಾರೆ. ’ಕಾಲಕ್ರೀಡೆ’ಯಲ್ಲಿ ಕಾಲ ಕ್ರೀಡೆ ಶಕ್ತಿಯ ಸೀಮೆಯನ್ನು ವಿಸ್ತರಿಸುವ ಮಾತು ಬರುತ್ತದೆ. ನಿಮ್ಮ ಕಾಲಕ್ರೀಡೆಯಲ್ಲೂ ನೀವಂತಹ ಪ್ರಯತ್ನ ಮಾಡಿದ್ದೀರೆಂದು ನನ್ನ ಭಾವನೆ’ ಎಂಬ ಅವರ ಮಾತು ವೈಯೆನ್ಕೆಯವರ ಕಾಲಕ್ರೀಡೆ ಲೇಖನ ಬರಹಗಳು ಸiಕಾಲೀನ ಜೀವನಾನುಭವಕ್ಕೆ ಸಂಬಂಧಿಸಿದ ಟೀಕೆ, ವಿಮರ್ಶೆಯನ್ನು ಧ್ವನಿಸುತ್ತಿದ್ದವು ಎಂಬುದನ್ನು ನೋಡಬಹುದು.
ವೈಯೆನ್ಕೆಯವರ ಕುರಿತ ಬರಹಗಳು ತೀರಾ ಕಡಿಮೆ. ಈ ಅತ್ಯಲ್ಪ ಕೃತಿಗಳಲ್ಲಿ ’ವಂಡರ್ ವೈಯೆನ್ಕೆ’ ಒಂದು. ಇದು ಕನ್ನಡದ ಮಟ್ಟಗೆ ಅಪರೂಪದ ಕೃತಿಯಾಗಿದೆ. ಏಕೆಂದರೆ ಸಂಪಾದಕ, ಪತ್ರಕರ್ತರೊಭ್ಬರ ಕುರಿತಾಗಿ ಅನೇಕ ಪತ್ರಕರ್ತ, ಕವಿಗಳು, ಬರಹಗಾರರ ಕುರಿತು ಬರೆದ ಬರಹಗಳ ಸಂಗ್ರಹ ಕೃತಿಯಾಗಿದೆ. ‘ಇನ್ನು ಕೆಲವು ಕೃತಿಗಳೆಂದರೆ ’ನನ್ನ ಪ್ರೀತಿಯ ವೈಯೆನ್ಕೆ’ ಮತ್ತು ವೈಯೆನ್ಕೆಯವರ ಬೆಸ್ಟ್ ಆಫ್ ವಂಡರ‍್ಸ್’. ನನ್ನ ಪ್ರೀತಿಯ ವೈಯೆನ್ಕೆ ಅವರ ಬದುಕಿನ ಕುರಿತು ಚಿತ್ರಣವಿದ್ದರೆ. ಬೆಸ್ಟ್ ಆಫ್ ವಂಡರ‍್ಸ್ ಕೃತಿಯ ಅವರ ಅಂಕಣ ಬರಹದ ಸಂಗ್ರಹವಾಗಿದೆ.