ಕ್ಷಮಿಸಿ ಎಂದ ಕೆಎಸ್ : ಹೋಗ್ಲಿ ಬಿಡಿ ಎಂದ ಭಾರದ್ವಾಜ್
ಬೆಂಗಳೂರು, ಸೆ. 20 : ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ನವದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದ್ದು, ಅಲ್ಲಿದ್ದವರಿಗೆ ಹುಬ್ಬೇರಿಸುವಂತೆ ಮಾಡಿತು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ವಿಷಯಕ್ಕೆ ಸಂಬಂಧಿಸಿದೆ ಈ ಇಬ್ಬರ ನಡುವೆ ಶರಂಪರ ಜಟಾಪಟಿ ನಡೆದಿರುವುದು ಗೊತ್ತಿರುವ ಸಂಗತಿ.
ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಈಶ್ವರಪ್ಪ ರಾಜ್ಯಪಾಲರಿಗೆ ಮನವಿ ಮಾಡಿಕೊಂಡರೆ, ಓಹೋ ಅದನ್ನೆಲ್ಲಾ ನಾನು ಮನಸ್ಸಿನಲ್ಲಿಟ್ಟಿಕೊಂಡೇ ಇಲ್ಲ. ನಿಮ್ಮ ಎಲ್ಲ ಹೇಳಿಕೆಗಳನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದ ರಾಜ್ಯಪಾಲ ಹಂಸ್ ರಾಜ್ ಭಾರದ್ವಾಜ್, ಈಶ್ವರಪ್ಪ ಅವರಿಗೆ ಹಸ್ತಲಾಘವ ಮಾಡಿ ಉಭಯ ಕುಶಲೋಪರಿ ನಡೆಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತರಬೇಕು ಎಂದು ಸದನದಲ್ಲಿ ಬಿಲ್ ಪಾಸ್ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದರೆ, ಒಂದು ವರ್ಗದ ಆಹಾರ ಪದ್ಧತಿಯನ್ನು ಸರಕಾರ ಕಿತ್ತುಕೊಳ್ಳುವುದು ಸರಿಯಲ್ಲ ಎಂದು ಹೇಳಿ ಅಂಕಿತಕ್ಕೆ ರಾಜ್ಯಪಾಲರು ನಿರಾಕರಿಸಿದ್ದರು. ಹೀಗಾಗಿ ಕಾಯ್ದೆಯನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರ ಮತ್ತು ರಾಜ್ಯಪಾಲರ ನಡುವೆ ವ್ಯಾಪಕ ಜಟಾಪಟಿ ನಡೆದಿತ್ತು.
ರಾಜ್ಯಪಾಲರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದ ಈಶ್ವರಪ್ಪ, ರಾಜ್ಯಪಾಲರು ರಾಜಭವನವನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಪೂರ್ವಶ್ರಮದ ನೆರಳನಿಂದ ಅವರು ಹೊರಬಂದಿಲ್ಲ. ಕೆಪಿಸಿಸಿ ಕಚೇರಿಯಲ್ಲಿ ರಾಜ್ಯಪಾಲರು ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳುವುದು ಒಳಿತು, ಹೀಗೆ ಅನೇಕ ಆರೋಪ, ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು. ಹೀಗಾಗಿ ರಾಜ್ಯಪಾಲರು ಮತ್ತು ಈಶ್ವರಪ್ಪ ಅವರ ಸಂಬಂಧ ಉತ್ತಮವಾಗಿಲ್ಲ ಎನ್ನುವ ಮಾತಿತ್ತು. ಆದರೆ, ಭಾನುವಾರ ಆಕಸ್ಮಿಕವಾಗಿ ಭೇಟಿಯಾದ ಈ ಇಬ್ಬರು ಉಭಯಕುಶಲೋಪರಿ ನಡೆಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ